ಸಾರಾಂಶ
ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸೂಚನೆಯ ಮೇರೆಗೆ ಜೈಲಿನಲ್ಲಿದ್ದ ಇಳಿ ವಯಸ್ಸಿನ ವೃದ್ಧೆಯನ್ನು ಮಾನವೀಯತೆ ಆಧಾರದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಕಲಬುರಗಿ: ಉಪ ಲೋಕಾಯುಕ್ತ ವೀರಪ್ಪ ಸೂಚನೆ ಮೇರೆಗೆ ಕ್ರಮ ಕನ್ನಡಪ್ರಭ ವಾರ್ತೆ ಕಲಬುರಗಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸೂಚನೆಯ ಮೇರೆಗೆ ಜೈಲಿನಲ್ಲಿದ್ದ ಇಳಿ ವಯಸ್ಸಿನ ವೃದ್ಧೆಯನ್ನು ಮಾನವೀಯತೆ ಆಧಾರದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ನಗರದ ಕೇಂದ್ರ ಕಾರಾಗೃಹದಲ್ಲಿದ್ದ ಜೇವರ್ಗಿ ತಾಲೂಕಿನ 93ರ ನಾಗಮ್ಮ ಅಣ್ಣಾರಾವ್ (ಮಹಿಳಾ ಕೈದಿ ಸಂಖ್ಯೆ: 1135) ಅವರು ಶನಿವಾರ ಬಿಡುಗಡೆ ಆಗಿದ್ದು, ಕುಟುಂಬಸ್ಥರು ಆ್ಯಂಬುಲೆನ್ಸ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸುಮಾರು 26 ವರ್ಷದ ಹಿಂದೆ ಸೊಸೆಯಿಂದ ದಾಖಲಾದ ವರದಕ್ಷಣೆ ಪ್ರಕರಣದಲ್ಲಿ ನಾಗಮ್ಮ ಅವರಿಗೆ ಹೈಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿತ್ತು.
ಈ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು. ಹಾಗಾಗಿ ಕಳೆದ 1 ವರ್ಷದಿಂದ ವೃದ್ಧೆ ಜೈಲಿನಲ್ಲಿದ್ದರು. ಇತ್ತೀಚೆಗೆ ಕಾರಾಗೃಹಕ್ಕೆ ಉಪ ಲೋಕಾಯುಕ್ತ ವೀರಪ್ಪ ಅವರು ಭೇಟಿ ನೀಡಿದಾಗ ಎದ್ದು ಓಡಾಡಲೂ ಆಗದ ನಾಗಮ್ಮ ಅವರ ಪರಿಸ್ಥಿತಿ ಕಂಡು ಮರುಗಿದ್ದರು. \
ಕೂಡಲೇ ಕಾನೂನಡಿ ಪೆರೋಲ್ ಮೇಲೆ ಬಿಡುಗಡೆಗೊಳಿಸುವಂತೆ ಕಾರಾಗೃಹದ ಅಧೀಕ್ಷಕಿ ಆರ್.ಅನಿತಾ ಹಾಗೂ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಅವರಿಗೆ ಸೂಚಿಸಿದ್ದರು. ಅಲ್ಲದೆ, ನಾಗಮ್ಮ ಅವರ ಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಈ ಹಿನ್ನೆಲೆ ಜೇವರ್ಗಿ ಪೊಲೀಸ್ ಠಾಣೆಯಿಂದ ವರದಿ ಪಡೆದ ಎಸ್‌ಪಿ ಶ್ರೀನಿವಾಸಲು ಅವರು ಮೂರು ತಿಂಗಳ ಕಾಲ ಪೆರೋಲ್ ಮೇಲೆ ನಾಗಮ್ಮ ಅವರನ್ನು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿದ್ದಾರೆ.