ಸಾರಾಂಶ
ಹೆರಿಗೆ ವೇಳೆ ಮಹಿಳೆಯೊಬ್ಬರಿಗೆ ವೈದರು ಹೊಟ್ಟೆಯಲ್ಲಿ ಹತ್ತಿ ಉಂಡೆ, ಬಟ್ಟೆಯಿಟ್ಟು ಹೊಲಿಗೆ ಹಾಕಿದ ಘಟನೆ ಇತ್ತಿಚೆಗಷ್ಟೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿತ್ತು.
ಕಲಬುರಗಿ/ಪುತ್ತೂರು : ಹೆರಿಗೆ ವೇಳೆ ಮಹಿಳೆಯೊಬ್ಬರಿಗೆ ವೈದರು ಹೊಟ್ಟೆಯಲ್ಲಿ ಹತ್ತಿ ಉಂಡೆ, ಬಟ್ಟೆಯಿಟ್ಟು ಹೊಲಿಗೆ ಹಾಕಿದ ಘಟನೆ ಇತ್ತಿಚೆಗಷ್ಟೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಅಂತಹದ್ದೇ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಭಾಗ್ಯಶ್ರೀ ಭಾಸಗಿ ಎಂಬುವವರು ಫೆ.5ರಂದು ಹೆರಿಗೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಬಟ್ಟೆಯ ಉಂಡೆ ಹೊಟ್ಟೆಯಲ್ಲಿಟ್ಟು ವೈದ್ಯರು ಹೊಲಿಗೆ ಹಾಕಿದ್ದಾರೆ. 1 ವಾರದ ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾಗ್ಯಶ್ರೀಗೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗ ಹೊಟ್ಟೆಯಲ್ಲಿ ಬಟ್ಟೆ ಉಂಡೆಯಿರುವುದು ಪತ್ತೆಯಾಗಿದೆ. ಕರ್ಜಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದು ಬಟ್ಟೆ ತೆಗೆಸಿದ್ದಾರೆ.
ಇದೇ ವೇಳೆ ದಕ್ಷಿಣ ಕನ್ನಡದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲೂ ಕಳೆದ ನ.27ರಂದು ಇಂತದ್ದೇ ಘಟನೆ ನಡೆದಿತ್ತು ಎಂದು ತಿಳಿದುಬಂದಿದೆ. ಹೆರಿಗೆ ಬಳಿಕ ವೈದ್ಯರು ಬಟ್ಟೆ ತುಂಡನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದರು. ಮನೆಗೆ ತೆರಳಿದ ಮಹಿಳೆಗೆ ವಿಪರೀತ ಜ್ವರ ಬಂದಿದ್ದು, ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿದಾಗ ಜ್ವರದ ಔಷಧಿಯನ್ನು ಬಳಸುವಂತೆ ಸೂಚಿಸಿದರು. ಜ್ವರ ಕಮ್ಮಿಯಾಗದ ಕಾರಣ ಸ್ಕ್ಯಾನ್ ಮಾಡಿಸಿ ಪುತ್ತೂರಿನ ಇನ್ನೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಬಿಟ್ಟಿದ್ದ ಬಟ್ಟೆಯನ್ನು ತೆರವು ಮಾಡಲಾಯಿತು ಎಂದು ಗೊತ್ತಾಗಿದೆ.