ಸಾರಾಂಶ
ಸ್ಮಾರ್ಟ್ ಫೋನ್ ಬಳಸುತ್ತ, ಗುಟ್ಕಾ, ಗಾಂಜಾ ಅಮಲಲ್ಲಿ ಹಾಯಾಗಿ ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆಂಬ ಸಂಗತಿ ಬಯಲಾದ ಬೆನ್ನಲ್ಲೇ ಇದೀಗ ಜೈಲಲ್ಲಿರುವ ಉಗ್ರನೋರ್ವ ಜೈಲು ಸಿಬ್ಬಂದಿ, ಸಹ ಕೈದಿಗಳಿಗೆ ತನ್ನ ಕುಟೀಲತನದಿಂದ ಬ್ಲ್ಯಾಕ್‌ಮೇಲ್ ಮಾಡುವ ಮಾಹಿತಿ ಬಹಿರಂಗವಾಗಿದೆ.
ಕಲಬುರಗಿ : ಕಲಬುರಗಿಯಲ್ಲಿರೋ ಕೇಂದ್ರ ಕಾರಾಗೃಹದಲ್ಲಿನ ಅಪಸವ್ಯಗಳಿಗೆ ಇನ್ನೂ ಬ್ರೆಕ್ ಬಿದ್ದಿಲ್ಲ! ಕೈದಿಗಳು ವಿಡಿಯೋಕಾಲ್, ಸ್ಮಾರ್ಟ್ ಫೋನ್ ಬಳಸುತ್ತ, ಗುಟ್ಕಾ, ಗಾಂಜಾ ಅಮಲಲ್ಲಿ ಹಾಯಾಗಿ ಜೈಲಲ್ಲಿ ಕಾಲ ಕಳೆಯುತ್ತಿದ್ದಾರೆಂಬ ಸಂಗತಿ ಬಯಲಾದ ಬೆನ್ನಲ್ಲೇ ಇದೀಗ ಜೈಲಲ್ಲಿರುವ ಉಗ್ರನೋರ್ವ ಜೈಲು ಸಿಬ್ಬಂದಿ, ಸಹ ಕೈದಿಗಳಿಗೆ ತನ್ನ ಕುಟೀಲತನದಿಂದ ಬ್ಲ್ಯಾಕ್‌ಮೇಲ್ ಮಾಡುತ್ತ ಇಡೀ ಕಾರಾಗೃಹವನ್ನೇ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ವಿಡಿಯೋ ಕಾಲ್ ಮಾಡಿದರೆಂದು 7 ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಇದೀಗ ಜೈಲಲ್ಲಿರೋ ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿರುವ ಉಗ್ರ ಜುಲ್ಫಿಕರ್ ಜೈಲು ಸಿಬ್ಬಂದಿ, ಸಹ ಕೈದಿಗಳನ್ನೇ ತಮ್ಮ ಮೋಸ, ಹನಿಟ್ರ್ಯಾಪ್ ಖೆಡ್ಡಾಕ್ಕೆ ಸಿಲುಕಿಸಿ ಅವರನ್ನೆಲ್ಲ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತ ಅಟ್ಟಹಾಸ ಮೆರೆಯುತ್ತಿದ್ದಾರೆ.
ಜೈಲಲ್ಲಿರುವ ಕೊಲೆ ಪ್ರಕರಣದಲ್ಲಿನ ಸಜಾ ಕೈದಿ ಸಾಗರ್ ಎಂಬಾತ ಜೈಲ್‌ನಿಂದಲೇ ದೂರವಾಣಿ ಕರೆ ಮಾಡಿ ಕಲಬುರಗಿ ಸೆಂಟ್ರಲ್ ಜೈಲಲ್ಲಿನ ಉಗ್ರರ ಉಪಟಳದ ಬಗ್ಗೆ ತಮ್ಮ ಮನೆ ಮಂದಿ ಜೊತೆ ವಿಸ್ತೃತವಾಗಿ ಮಾತನಾಡಿದ್ದಾನೆ. ಇದೀಗ ಸಾಗರ್ ಮಾತನಾಡಿರುವ ಅಂದಾಜು 12 ನಿಮಿಷಗಳ ಧ್ವನಿಮುದ್ರಣ ಟೇಪ್ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ಅ.11ರ ಸಂಜೆ 5.40ಕ್ಕೆ ಜೈಲಲ್ಲಿರೋ ಸಜಾ ಕೈದಿ ಸಾಗರ್ ಎಂಬಾತ ತಮ್ಮ ತಂದೆ ಹಾಗೂ ಸಹೋದರರೊಂದಿಗೆ ಮಾತನಾಡಿರುವ 11 ನಿಮಿಷ 48 ಸೆಕೆಂಡ್‌ಗಳ ಸುದೀರ್ಘ ಆಡಿಯೋದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಜುಲ್ಫಿಕರ್, ಬಚ್ಚನ್ ಜೊತೆಗೂಡಿ ಏನೆಲ್ಲಾ ರಾದ್ಧಾಂತಗಳನ್ನು ಮಾಡುತ್ತ ಇಡೀ ಜೈಲನ್ನೇ ಹೇಗೆ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆಂಬುದರ ಇಂಚಿಂಚೂ ಮಾಹಿತಿ ಹೊರಹಾಕಿದ್ದಾನೆ.
ತನ್ನ ಜೀವಕ್ಕೆ ಏನಾದರೂ ಕುತ್ತು ಬಂದಲ್ಲಿ ಅದಕ್ಕೆ ಜೈಲಲ್ಲಿರುವ ಉಗ್ರ ಜುಲ್ಫೀಕರ್ ಹಾಗೂ ಬಚ್ಚನ್ ಇವರಿಬ್ಬರೇ ಕಾರಣ ಎಂದೂ ಸಾಗರ್ ದೂರವಾಣಿ ಸಂಭಾಷಣೆಯಲ್ಲಿ ಆತಂಕ ಹೊರಹಾಕಿದ್ದಾನೆ. ದೂರು ಕೊಡು ಎಂದು ಪೋಷಕರು ನೀಡಿದ್ದ ಸಲಹೆಗೆ ಸಾಗರ್ ಆತಂಕ ಹೊರಹಾಕಿದ್ದು ಇವರಿಬ್ಬರೂ ಖತರ್‌ನಾಕ್ ಇದ್ದಾರೆ, ಈಗಲೇ ದೂರು ಕೊಟ್ಟರೇ ನನಗೇ ಟಾರ್ಚರ್ ಕೊಡ್ತಾರೆ, ಮುಂದೆ ನೋಡೋಣವೆಂದಿದ್ದಾನೆ.
ಹಣಕ್ಕಾಗಿ ಜೈಲಿನಲ್ಲಿರುವ ಕೈದಿಗಳಿಗೆ ಬ್ಲ್ಯಾಕ್ ಮೇಲ್!:
ಉಗ್ರ ಜುಲ್ಫಿಕರ್ ಆಡಿದ್ದೇ ಇಲ್ಲಿ ಆಟವಾದಂತಾಗಿದೆ. ಜೈಲು ಸಿಬ್ಬಂದಿಗೆ ಲಂಚ ಕೊಟ್ಟು ಮೊದಲು ತನ್ನ ಬಳಿ ಅತ್ಯಾಧುನಿಕ ಸ್ಮಾರ್ಟ್ ಪೋನ್ ಇಟ್ಟುಕೊಳ್ಳುತ್ತಾನೆ. ಹಣ ಕೊಡುವಾಗಲೇ ಗೊತ್ತಿರದಂತೆ ಉಪಾಯವಾಗಿ ಜೈಲು ಸಿಬ್ಬಂದಿ ಹಣ ಪಡೆಯುವ ವಿಡಿಯೋ ಮಾಡಿಟ್ಟುಕೊಂಡು ಅವರಿಗೆ ಹೆದರಿಸಲು ಶುರು ಮಾಡುತ್ತಾನೆ. ಅವರು ಇವನ ಸಹವಾಸವೇ ಬೇಡಪ್ಪ ಎಂದು ದೂರಾಗುತ್ತಾರೆ, ಆಗ ಸಹ ಕೈದಿಗಳನ್ನು ತನ್ನ ಸಂಪರ್ಕಕ್ಕೆ ಕರೆಯಿಸಿಕೊಂಡು ದೂರದ ಮುಂಬೈನ ಬಾರ್ ಗರ್ಲ್‌ಗಳೊಂದಿಗೆ ನಂಟು ಇಟ್ಟಿಕೊಂಡಿರುವ ಜುಲ್ಫಿಕರ್ ಅವರೊಂದಿಗೆ ವಿಡಿಯೋ ಕಾಲ್ ಮಾಡಿಸಿ ಬೆತ್ತಲಾಗಿಸಿ ವಿಡಿಯೋದಲ್ಲೇ ಹನಿಟ್ರ್ಯಾಪ್ ಮಾಡುತ್ತಾನೆ. ಆ ವಿಡಿಯೋಗಳನ್ನು ರಿಕಾರ್ಡ್ ಮಾಡಿಟ್ಟುಕೊಂಡು ಹಣಕ್ಕಾಗಿ ಅವರಿಗೆ ಬಲೆ ಹಾಕುತ್ತಾನೆ. ತನ್ನನ್ನು ಇದೇ ರೀತಿ ಹತ್ತಿರಕ್ಕೆ ಸೆಳೆದು ಆಟ ಆಡಿಸುತ್ತ ಹಣಕ್ಕಾಗಿ ಸತಾಯಿಸುತ್ತಿದ್ದಾನೆಂದು ಖುದ್ದು ಕೈದಿ ಸಾಗರ್ ಆಡಿರುವ ಮಾತು ಉಗ್ರನ ಉಪಟಳಕ್ಕೆ ಕನ್ನಡಿ ಹಿಡಿದಿದೆ.
ಸ್ಮಾರ್ಟ್ ಫೋನ್ ಬಾಡಿಗೆ ಕೊಡುತ್ತಿರೋ ಉಗ್ರ!:
ಜೈಲಲ್ಲಿ ಸಹ ಕೈದಿಗಳಿಗೆ ಸ್ಮಾರ್ಟ್ ಪೋನ್ ಬಳಕೆಗೆ ಕೊಡುತ್ತ ವಿಡಿಯೋ ಕಾಲ್, ನಾರ್ಮಲ್ ಕಾಲ್‌ಗೆ ಒಂದೊಂದು ರೇಟ್ ಫಿಕ್ಸ್ ಮಾಡಿ ಹಣ ಪಡೆಯುತ್ತಿರೋದು ಬಯಲಾಗಿದೆ. ಇಲ್ಲಿಂದ ಈಚೆಗೆ ಹೊರಗಡೆ ಹೋಗಿದ್ದ ವಿಡಿಯೋ ಕರೆಗಳ ಜಾಲ ಹಿಡಿದು ನಡೆಸಲಾಗಿರುವ ತನಿಖೆಯಲ್ಲಿ ಇದೆ ಮೊಬೈಲ್ ಬಳಕೆಯಾಗಿರೋದು ಖಚಿತವಾಗಿದ್ದು ಇದೀಗ ಜುಲ್ಫಿಕರ್ ಮೊಬೈಲ್ ತೆಗೆದುಕೊಂಡು ಕರೆ ಮಾಡ್ತಿದ್ದವರಿಗೆ ಸಂಕಷ್ಟ ಸುತ್ತಿಕೊಳ್ಳುವ ಸಾಧ್ಯತೆಗಳಿವೆ.
50 ಸಾವಿರ ಹಣಕ್ಕಾಗಿ ಕೈದಿ ಸಾಗರ್‌ಗೆ ಬ್ಲ್ಯಾಕ್‌ಮೇಲ್:
ಜೈಲಲ್ಲಿರುವ ಕೊಲೆ ಆರೋಪಿ ಸಾಗರ್‌ಗೆ ಸ್ಮಾರ್ಟ್ ಫೋನ್ ಬಳಸಲು ಕೊಟ್ಟು ತಮ್ಮತ್ತ ಸೆಳೆದಿರುವ ಜುಲ್ಫಿಕರ್, ಬಚ್ಚನ್ ಜೊಡಿ ಈತನಿಗೂ ಬಾರ್‌ಗರ್ಲ್‌ಗಳೊಂದಿಗೆ ಮಾತನಾಡಿಸಿ ಬೆತ್ತಲಾಗಿಸಿ ವಿಡಿಯೋ ಇಟ್ಟುಕೊಂಡು 50 ಸಾವಿರ ರು. ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಖುದ್ದು ಸಾಗರ್ ತಮ್ಮ ಪೋಷಕರಿಗೆ ಕರೆ ಮಾಡಿ ಗೋಳಾಡಿದ್ದಾನೆ.