ಇಂದು ಕಲಬುರಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Aug 29 2024, 12:49 AM IST

ಸಾರಾಂಶ

ಜೀವನ ಕೂಡ ಸಾಹಿತ್ಯ ಒಂದಾಗಿದೆ. ಇವತ್ತಿನ ಒತ್ತಡದಲ್ಲಿ ನಾವು ಕೌಟುಂಬಿಕ ಜೀವನ ಮತ್ತು ಸವಾಲುಗಳನ್ನು ಮೆಟ್ಟಿ ಚಲನಶೀಲ ಬದುಕು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಆ.29ರಂದು ಕಲಬುರಗಿಯಲ್ಲಿ ಸಂಘಟಿಸಲಾಗುತ್ತಿದೆ. ತಾಲೂಕು ಕಸಾಪ ವತಿಯಿಂದ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಅವರ ನೇತೃತ್ವದಲ್ಲಿ ಗುರುವಾರದಂದು ನಗರದ ಕನ್ನಡ ಭವನದ ಆವರಣದಲ್ಲಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಸಾಗಿವೆ.

ಬೆಳಗ್ಗೆ 8.30 ಕ್ಕೆ ಧ್ವಜಾರೋಹಣ ನೆರವೇರಿಸಿ, ನಂತರ ಬೆಳಗ್ಗೆ 9.30 ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಛೇರಿಯಿಂದ ಕನ್ನಡ ಭವನದ ವರೆಗೆ ವಿವಿಧ ಕಲಾ ಮೇಳಗಳೊಂದಿಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ಜರುಗಲಿದೆ.

10.45 ಕ್ಕೆ ಸಾಹಿತಿ ಶಿವಕವಿ ಹಿರೇಮಠ ಜೋಗೂರ ವೇದಿಕೆಯಡಿಯಲ್ಲಿ ಜರುಗಲಿರುವ ಸಮ್ಮೇಳನವನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಡಾ. ಲಿಂಗರಾಜಪ್ಪ ಅಪ್ಪ ಅವರು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಆಶಯ ನುಡಿಗಳನ್ನಾಡುವರು.

ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ಹಿಂದಿನ ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಬದುಕು-ಬರಹಗಳನ್ನೊಳಗೊಂಡ ಹೊನ್ನುಸಿರು ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲೂಕಾ ಸಾಹಿತ್ಯ ಸಮ್ಮೇಳನಗಳ ಹಿಂದಿನ ಸರ್ವಾಧ್ಯಕ್ಷರುಗಳನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.

12.15 ಕ್ಕೆ ನಡೆಯುವ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ತಾಲೂಕಿನ ಮಹಿಳಾ ಸಾಹಿತ್ಯ ವಿಷಯದ ಕುರಿತು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಅನೇಕತೆಯಲ್ಲಿ ಏಕತೆ-ಕಲಬುರಗಿ ಎಂಬ ವಿಷಯದ ಕುರಿತು ಮಹ್ಮದ್ ಅಯಾಜುದ್ದೀನ್ ಪಟೇಲ್ , ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಪ್ರೊ. ನಿಂಗಮ್ಮ ಪತಂಗೆ ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕಾ ಕಸಾಪ ದ ನಿಕಟಪೂರ್ವ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಅವರು ಆಶಯ ನುಡಿಗಳನ್ನಾಡುವರು.

2.15 ಕ್ಕೆ ಹಿರಿಯ ಸಾಹಿತಿ ಡಾ. ರಾಜೇಂದ್ರ ಯರನಾಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಪತ್ರಕರ್ತ-ಸಾಹಿತಿ ಸಂಗಮನಾಥ ರೇವತಗಾಂವ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ ಸೇರಿ ಅನೇಕರು ಉಪಸ್ಥಿತರಿರುವರು. 4.15 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಸೇರಿ ಅನೇಕ ಗಣ್ಯರು ಉಪಸ್ಥಿತರಿರುವರು.

ಮಹಿಳೆಯರ ಸಾಂಸ್ಕೃತಿಕ ಬದುಕಿಗೆ ಸಂವೇದನಾಶೀಲ ಸಾಹಿತ್ಯ ಅವಶ್ಯ:

ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಬಲತ್ಕಾರ, ಶೋಷಣೆ ಹೆಚ್ಚುತ್ತಿದ್ದು, ಸುರಕ್ಷತೆ ಇಲ್ಲದಂತಾಗಿದೆ ಎಂದು ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಪ್ರಮೀಳಾ ಜಾನಪ್ಪಗೌಡ ಅವರು ಹೇಳಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ನಡೆಸಿದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನ ಕೂಡ ಸಾಹಿತ್ಯ ಒಂದಾಗಿದೆ. ಇವತ್ತಿನ ಒತ್ತಡದಲ್ಲಿ ನಾವು ಕೌಟುಂಬಿಕ ಜೀವನ ಮತ್ತು ಸವಾಲುಗಳನ್ನು ಮೆಟ್ಟಿ ಚಲನಶೀಲ ಬದುಕು ಕಟ್ಟಿಕೊಳ್ಳಬೇಕು. ಇದಕ್ಕಾಗಿ ಮಹಿಳೆಯರು ಮುಂದಾಗಬೇಕು. ಮಹಿಳೆಯರ ತಾಳ್ಮೆಯೇ ಪುರುಷರ ಏಳಿಗೆ ಸಾಧ್ಯ. ಇಂದು ಮಾತೃಭಾಷೆಯ ಕಲಿಕೆಯಿಂದ ಉತ್ತಮ ಜ್ಞಾನ ಪಡೆಯಬಹುದು. ಮನೆಯಿಂದಲೇ ಕನ್ನಡ ಭಾಷೆ ಉಳಿಯಬೇಕಾಗಿದೆ. ಮಕ್ಕಳನ್ನು ಕನ್ನಡ ಕಾರ್ಯ ಚಟುವಟಿಕೆ ಕೈಗೊಂಡು ಅವರಲ್ಲಿ ಭಾಷಾ ಪ್ರಜ್ಞೆ ಬೆಲೆಸಲು ಕನ್ನಡ ಸಾಹಿತ್ಯ ಪರಿಷತ್ತು ಯೋಜನೆ ಹಾಕಿಕೊಳ್ಳಬೇಕು ಎಂದು ಹೇಳಿದರು.

ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡದ ಕಾರ್ಯಗಳನ್ನು ಗೌರವಿಸುವಂಥ ಕೆಲಸ ಆಗಬೇಕು. ಜೀವನ ಮೌಲ್ಯಗಳನ್ನು ಮರೆತು ಬದುಕು ಸಾಗಿಸುವ ಒತ್ತಡದಲ್ಲಿದ್ದೇವೆ. ಮೌಲ್ಯಗಳು ನಮ್ಮ ಬದುಕು ಹಸನಾಗಿಸುತ್ತವೆ. ಸುಖ ಸಂತೋಷಗಳು ಮೌಲ್ಯಗಳ ಜೊತೆಯಲ್ಲಿವೆ. ತಾಯಿ, ಗುರು, ರೈತ, ಸೈನಿಕ ಮತ್ತು ಸಾಹಿತಿಗಳು ಸಮಾಜದ ನಿಜವಾದ ಆಸ್ತಿವಂತರು.

ಸ್ತ್ರೀ ಸಂವೇದನೆಯ ಸಾಹಿತ್ಯ ಸಮಾಜಕ್ಕೆ ಅವಶ್ಯವಾಗಿದೆ. ಮಹಿಳಾ ಸಾಹಿತ್ಯ ಪರಂಪರೆ ಮುಂದುವರಿಸಿಕೊಂಡು ಸಾಗಬೇಕು. ಕನ್ನಡದ ಆಸ್ತಿ ಮುಂದಿನ ಪೀಳಿಗೆಗೆ ಮುಂದುವರಿಸಬೇಕು. ಆಗ ಮಾತ್ರ ಸಾಹಿತ್ಯ ಇನ್ನಷ್ಟು ಸಿರಿಯಾಗಬಲ್ಲದು. ಈ ದಿಸೆಯಲ್ಲಿ ಸರಕಾರ, ಸಂಘ ಸಂಸ್ಥೆಗಳು ಸೇರಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ತೀವ್ರ ಅಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ಕಲ್ಯಾಣಕರ್ ಮಾತನಾಡಿದರು. ವಿಷಲಾಕ್ಷಿ ಮಾಯಣ್ಣವರ್, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ ವೇದಿಕೆ ಮೇಲಿದ್ದರು.