ಭಾರತದೆಲ್ಲೆಡೆ ಹಿಂದುಗಳು ಜಾಗೃತರಾಗುತ್ತಿದ್ದಾರೆ. ಜಾತಿ, ಮತದ ಪ್ರಭಾವ ಕಡಿಮೆಯಾಗುತ್ತದೆ. ಹಿಂದು ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ

ಕಾಪು: ಭಾರತದೆಲ್ಲೆಡೆ ಹಿಂದುಗಳು ಜಾಗೃತರಾಗುತ್ತಿದ್ದಾರೆ. ಜಾತಿ, ಮತದ ಪ್ರಭಾವ ಕಡಿಮೆಯಾಗುತ್ತದೆ. ಹಿಂದು ಪೂರ್ಣ ಪ್ರಮಾಣದಲ್ಲಿ ಜಾಗೃತನಾದಾಗ ಹಿಂದುತ್ವದ ಅಸ್ತಿತ್ವ ಸದೃಢವಾಗುತ್ತದೆ ಎಂದು ಕುತ್ಯಾರು ಶ್ರೀ ಆನೆಗುಂದಿ ಮಹಾ ಸಂಸ್ಥಾನದ ಅನಂತಶ್ರೀ ವಿಭೂಷಿತ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಭಾರ್ಗವ ಭವನದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಾಪು ತಾಲೂಕು ವ್ಯಾಪ್ತಿಯ ಕುತ್ಯಾರು, ಕಳತ್ತೂರು, ಪಿಲಾರು, ಸಾಂತೂರು ಗ್ರಾಮಗಳನ್ನು ಒಳಗೊಂಡ ಕುತ್ಯಾರು ಮಂಡಲದ ಹಿಂದೂ ಸಂಗಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಬಲಿದಾನದಲ್ಲಿ ನಮ್ಮ ಅಸ್ತಿತ್ವ ದಿಕ್ಸೂಚಿ ಭಾಷಣ ಮಾಡಿದ ರಾಜ್ಯ ದೇವಸ್ಥಾನ ಸಂವರ್ಧನ ಸಮಿತಿಯ ರಾಜ್ಯ ಸಂಚಾಲಕ ಮನೋಹರ ಮಠದ್, ಸಜ್ಜನರ ನಿಷ್ಕ್ರಿಯತೆಯಿಂದ ದುರ್ಜನರು ಸಕ್ರಿಯರಾಗಿದ್ದಾರೆ. ಈ ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಕ್ರಾಂತಿ ಆಗಬೇಕು. ನಮ್ಮದು ಸಂಘರ್ಷದ ಇತಿಹಾಸ. ಅನೇಕ ಸಾಧು ಸಂತರು, ದೇಶಭಕ್ತರು ಮಾಡಿದ ಹೋರಾಟದ ಫಲವಾಗಿ ದೇಶಭಕ್ತರ, ಕ್ರಾಂತಿಕಾರರ ತ್ಯಾಗ, ಬಲಿದಾನದಿಂದ ನಮ್ಮ ಅಸ್ತಿತ್ವ ಉಳಿದಿದೆ ಎಂದರು. ಆಯೋಜನಾ ಸಮಿತಿಯ ಕಾಪು ತಾಲೂಕು ಉಪಾಧ್ಯಕ್ಷ ಜಿನೇಶ್ ಬಲ್ಲಾಳ್ ಕುತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪವನ್ ಕುಮಾರ್ ಸ್ವಾಗತಿಸಿದರು. ಕುತ್ಯಾರು ಮಂಡಲ ಸಂಚಾಲಕ ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಾ ಕುತ್ಯಾರು ವೈಯುಕ್ತಿಕ ಗೀತೆ ಹಾಡಿದರು. ಪ್ರವೀಣ್ ಆಚಾರ್ಯ ನಿರೂಪಿಸಿದರು. ಮಾನುಷ್ ವಂದಿಸಿದರು. ಪ್ರಕಾಶ್ ಕಿಣಿ ನೇತೃತ್ವದಲ್ಲಿ ಅನುಷಾ, ಅನನ್ಯಾ, ಮಹೇಶ್ ಭಟ್, ಅಭಿಷೇಕ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಅನೇಕ ಗಣ್ಯರು, ಸಾವಿರಕ್ಕೂ ಅಧಿಕ ಹಿಂದೂ ಬಂಧುಗಳು ಭಾಗವಹಿಸಿದ್ದರು.

ಶೋಭಾಯಾತ್ರೆ ಕುತ್ಯಾರು ಯುವಕ ಮಂಡಲದಿಂದ ಮತ್ತು ಕುತ್ಯಾರು ದಾರೊಂಟುನಿಂದ ಬೃಹತ್ ಶೋಭಾ ಯಾತ್ರೆ-ಸಂಗಮ ಆರಂಭವಾಗಿ ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಭಾರ್ಗವ ಭವನದಲ್ಲಿ ಸಂಗಮವಾಯಿತು, ವೇ,ಮೂ.ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಜಿನೇಶ್ ಬಲ್ಲಾಳ್, ಕಿಶೋರ್ ಗುರ್ಮೆ ಚಾಲನೆ ನೀಡಿದರು.