ಸಾರಾಂಶ
ಇಲ್ಲಿಯ ರೈಲ್ವೆ ಸ್ಟೇಶನ್‌ದಿಂದ ಕಳಲಕೊಂಡ ಮಾರ್ಗವಾಗಿ ಹಾವೇರಿ ಜಿಲ್ಲಾಡಳಿತ ಭವನಕ್ಕೆ ಹೋಗುವ ರಸ್ತೆ ಎರಡು ದಶಕಗಳಿಂದ ಡಾಂಬರೀಕರಣ ಕಾಣದೇ ಗುಂಡಿಗಳ ಆಗರವಾಗಿದೆ.
ಪವನ ಲಮಾಣಿಕನ್ನಡಪ್ರಭ ವಾರ್ತೆ ಸವಣೂರಇಲ್ಲಿಯ ರೈಲ್ವೆ ಸ್ಟೇಶನ್‌ದಿಂದ ಕಳಲಕೊಂಡ ಮಾರ್ಗವಾಗಿ ಹಾವೇರಿ ಜಿಲ್ಲಾಡಳಿತ ಭವನಕ್ಕೆ ಹೋಗುವ ರಸ್ತೆ ಎರಡು ದಶಕಗಳಿಂದ ಡಾಂಬರೀಕರಣ ಕಾಣದೇ ಗುಂಡಿಗಳ ಆಗರವಾಗಿದೆ.
ಆಗಾಗ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಾರೆ. ಮತ್ತೆ ಒಂದು ತಿಂಗಳಲ್ಲಿ ರಸ್ತೆಯ ಯಥಾಸ್ಥಿತಿ ಅನಾವರಣ ಆಗುತ್ತದೆ.ಕಳಲಕೊಂಡ ಗ್ರಾಮದ ಉದ್ದಕ್ಕೂ ರಸ್ತೆಯ ಎರಡು ಬದಿಯಲ್ಲಿ ಪಕ್ಕಾ ಗಟಾರ ಇಲ್ಲದೇ ಇರುವುದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಹಳ್ಳ ನಿರ್ಮಾಣವಾಗಿದೆ. ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ರಾಡಿ ಮೈಮೇಲೆ ಸಿಡಿದು ಎಷ್ಟೋ ಬಾರಿ ಮುಜುಗರ ಅನುಭವಿಸಿದ್ದಾರೆ.
ಅಧಿಕಾರಿಗಳ ಹುಸಿ ಭರವಸೆ:ವಾಹನ ಸಂಚಾರ ಹಾಗೂ ದಿನನಿತ್ಯ ಕೆಲಸ ಕಾರ್ಯಗಳಿಗೆ ಹೋಗುವ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇಂದಿನ ಹಾಗೂ ಹಿಂದಿನ ಶಾಸಕರು ಹಾಗೂ ಸಂಸದರು ಮತ್ತು ಪ್ರಸ್ತುತ ಅಪರ ಜಿಲ್ಲಾಧಿಕಾರಿ ವೀರಮ್ಮಲ್ಲಪ್ಪ ಪೂಜಾರ ಅವರಿಗೂ ಸಹ ಪತ್ರ ಬರೆದು ಮನವಿಯನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಹುಸಿ ಭರವಸೆಗೆ ಗ್ರಾಮದ ಜನರು ಹಿಡಿಶಾಪ ಹಾಕುತ್ತಿದ್ದಾರೆ.ಮಳೆ ಬಂದರೆ ಚರಂಡಿಯ ನೀರು ರಸ್ತೆ ಮೇಲೆ ಹರಿದು ದಲಿತರ ಕಾಲೋನಿಗೆ ನುಗ್ಗಿ ಇಲ್ಲಿನ ವಾಸವೇ ದುಸ್ತರವೆನಿಸುತ್ತದೆ. ವಿಷಕಾರಿ ಜಂತುಗಳು ಮನೆಗೆ ಬರುವುದರಿಂದ ಭಯದ ವಾತಾವರಣದಲ್ಲಿ ವಾಸ ಮಾಡುವುದು ಆಗಿದೆ ಎಂದು ದಲಿತ ಕಾಲೋನಿ ಜನರು ತಿಳಿಸಿದ್ದಾರೆ.
ಕಳಲಕೊಂಡ ಗ್ರಾಮದ ಈ ರಸ್ತೆ ಕಿರಿದಾಗಿದ್ದು, ಎರಡು ಬದಿಗಳಲ್ಲಿ ವಾಹನಗಳು ಒಂದೇ ಸಮಯಕ್ಕೆ ಬಂದರೆ ಸಂಚರಿಸುವುದು ಕಷ್ಟ ಸಾಧ್ಯವಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.