ಕಲಾಂ ಸಂಸ್ಥೆ: ಅಧಿಕಾರಿಗಳ ಕರ್ತವ್ಯ ಲೋಪ

| Published : Mar 15 2025, 01:01 AM IST

ಸಾರಾಂಶ

ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ ಮತ್ತು ಗಣಕಯಂತ್ರ ಫಲಾನುಭವಿ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಉಚಿತವಾಗಿ ನಿಯೋಜಿಸಲು ಹಲವು ಷರತ್ತುಗಳನ್ನು ವಿಧಿಸಿ ಚಾ.ನಗರ ಡಿಡಿಪಿಐ ರಾಮಚಂದ್ರರಾಜೇ ಅರಸು ಆದೇಶ ನೀಡಿದ್ದು ಈ ಬೆನ್ನಲ್ಲೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ಅಬ್ದುಲ್ ಕಲಾಂ ಸಂಸ್ಥೆಯಿಂದ ನೇಮಕಗೊಂಡ ಫಲಾನುಭವಿಗಳಿಗೆ ಶಾಲೆಗಳಿಗೆ ತೆರಳಲು ಆದೇಶ ನೀಡಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ ಮತ್ತು ಗಣಕಯಂತ್ರ ಫಲಾನುಭವಿ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಉಚಿತವಾಗಿ ನಿಯೋಜಿಸಲು ಹಲವು ಷರತ್ತುಗಳನ್ನು ವಿಧಿಸಿ ಚಾ.ನಗರ ಡಿಡಿಪಿಐ ರಾಮಚಂದ್ರರಾಜೇ ಅರಸು ಆದೇಶ ನೀಡಿದ್ದು ಈ ಬೆನ್ನಲ್ಲೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ಅಬ್ದುಲ್ ಕಲಾಂ ಸಂಸ್ಥೆಯಿಂದ ನೇಮಕಗೊಂಡ ಫಲಾನುಭವಿಗಳಿಗೆ ಶಾಲೆಗಳಿಗೆ ತೆರಳಲು ಆದೇಶ ನೀಡಿರುವುದು ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಅಬ್ದುಲ್ ಕಲಾಂ ಸಂಸ್ಥೆಯ ಲೆಟರ್ ಬಳಸಿ ಡಿಡಿಪಿಐ ಅವರಿಂದ ಅನುಮತಿ ಪಡೆದ ಕೊಳ್ಳೇಗಾಲದ ಫೇಕ್ ಸಂಸ್ಥೆಯ ಪದಾಧಿಕಾರಿಗಳು ಎನಿಸಿಕೊಂಡವರು ವಿತರಿಸಿರುವ ನೇಮಕಾತಿ ಆದೇಶದಿಂದ ಇಲ್ಲಿನ ಅವ್ಯವಹಾರ, ಗೊಂದಲ ನಾನಾ ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ. ಕೊಳ್ಳೇಗಾಲ ಅಬ್ದುಲ್ ಕಲಾಂ ಸಂಸ್ಥೆಯವರು ಅನುಮತಿ ಪಡೆದು ಅವರೇ ಕಂಪ್ಯೂಟರ್, ಯೋಗ ತರಬೇತಿ ಶಿಕ್ಷಕರನ್ನು ಆಯ್ಕೆ ಮಾಡಿ ಆದೇಶ ನೀಡುವ ವೇಳೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಎಂದು ನಮೂದಿಸಲಾಗಿರುವ ಲೆಟರ್ ಬಳಸಿ ಕೃಷ್ಣ ಎಂಬುವರು ಸಹಿ ಹಾಕಿರುವ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು ಶಿಕ್ಷಣ ಇಲಾಖಾಧಿಕಾರಿಗಳ ಕರ್ತವ್ಯ ಲೋಪಕ್ಕೆ ಈ ಪತ್ರ ತಾಜಾ ಉದಾಹರಣೆಯಂತಿದೆ.

ಡಿಡಿಪಿಐ ಆದೇಶವನ್ನೇ ಮಾನದಂಡ ಮಾಡಿಕೊಂಡಿರುವ ಸಂಸ್ಥೆ ಮತ್ತು ಕೆಲ ಬಿಇಒಗಳು ತಾವೇ ಸ್ವತಃ ಕೆಲ ಮುಖ್ಯ ಶಿಕ್ಷಕರಿಗೆ ಮೌಖಿಕ ಆದೇಶದ ಮೂಲಕ ಆಯಾ, ಅಟೆಂಡರ್ ನೇಮಕಕ್ಕೂ ಕಾರಣರಾಗಿ ಕರ್ತವ್ಯ ಲೋಪ ಎಸಗಿರುವ ಪ್ರಕರಣಗಳು ಕೊಳ್ಳೇಗಾಲ ತಾಲೂಕು ಮಾತ್ರವಲ್ಲ ಚಾ.ನಗರ ಜಿಲ್ಲಾದ್ಯಂತ ಸಾಕಷ್ಟಿವೆ ಎನ್ನಲಾಗುತ್ತಿದೆ. ಎಂ.ಶ್ರೀನಿವಾಸ್, ಸುನೀಲ್, ಪ್ರಸಾದ್‌, ಮಹದೇವಮ್ಮ ಸೇರಿದಂತೆ ಅನೇಕ ಮಂದಿಯನ್ನು ನಿಯಮ ಉಲ್ಲಂಘಿಸಿ ಹಣ ಪಡೆದು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಅಲ್ಲದೆ ದೀಪಿಕಾ, ಗೀತಾ ,ಅಂಚಿಪಾಳ್ಯದ ಕವಿತಾ , ಅಂಜಲಿ, ಕಾವ್ಯ, ಗೀತಾ, ಪ್ರಸಾದ್ ಸೇರಿದಂತೆ 40ಮಂದಿಯನ್ನು (ಯೋಗ ಮತ್ತು ಅಟೆಂಡರ್) ನಮೂದಿಸಿ ಆದೇಶ ನೀಡಲಾಗಿರುವುದು ಮತ್ತು ಸಕಾಲದಲ್ಲಿ ಅವರಿಗೆ ಸಂಬಳ ಪಾವತಿಸದಿರುವುದು. ನಾನಾ ಸಂಶಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಅಲ್ಲದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಿಪುರ ಮತ್ತು ರಾಮಾಪುರ ಶಾಲೆಗಳಲ್ಲಿ ಆಯಾವನ್ನು ಸಹಾ ನಿಯಮ ಮೀರಿ ನೇಮಿಸಿಕೊಳ್ಳಲಾಗಿದೆ. ಈಸಂಬಂಧ ಹಿರಿಯ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲೆ ಮುಖ್ಯ ಶಿಕ್ಷಕರು ಉಲ್ಲೇಖಿಸಿದ್ದು ಆಯಾ ನೇಮಕದ ವಿಚಾರ ಬಿಇಒ ಗಮನಕ್ಕೂ ತರಲಾಗಿದೆ ಎಂದು ಕಳೆದ 2- 3ತಿಂಗಳ ಹಿಂದೆಯೇ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ನಿಯಮ ಮೀರಿ ಆದೇಶ ಪ್ರಕರಣ:

ಹನೂರು ಬಿಇಒ ವಿರುದ್ಧ ದೂರು ಹನೂರು ಶೈಕ್ಷಣಿಕ ವಲಯದ ಬಿಇಒ ಒಬ್ಬ ಸರ್ಕಾರಿ ಅಧಿಕಾರಿಯಾಗಿ ನಿಯಮ ಮೀರಿ ಡಿ.20 ರಂದು ಆದೇಶ ಹೊರಡಿಸಿದ್ದು ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ನಿರಂಜನ್ ಎಂಬುವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಡಿಡಿಪಿಐ ಅವರು ಕಳೆದ ಜು.7 ರಂದು ಕೊಳ್ಳೇಗಾಲದ ಕಲಾ ಸಂಸ್ಥೆ ಗಣಕಯಂತ್ರ, ಯೋಗ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲು 12ಷರತ್ತುಗನ್ನು ವಿಧಿಸಿ ಆದೇಶ ನೀಡಿದ್ದಾರೆ. ಆದರೆ ಆದೇಶದಲ್ಲಿ ಅಟೆಂಡರ್ ನೇಮಕಕ್ಕೆ ಸೂಚಿಸಿರುವುದಿಲ್ಲ, ಈ ಹಿನ್ನೆಲೆ ತಾವೇ ಈ ಪ್ರಕರಣದಲ್ಲಿ ಭಾಗಿಯಾಗಿ ಅಟೆಂಡರ್ ನೇಮಿಸಿಕೊಂಡು ಪುನಃ ತಾವೇ ಅಟೆಂಡರ್ ಬಿಡುಗಡೆಗೊಳಿಸಿ ಎಂದು ಕಳೆದ ಡಿ.20ರಂದು ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಗಮನಕ್ಕೆ ತರದೆ ಆದೇಶ ಹೊರಡಿಸುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ತರವಲ್ಲದ ವರ್ತನೆ ತೋರಿದ ಇವರ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ನಿರಂಜನ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಡಿಡಿಪಿಐ ವಿರುದ್ಧ ಸಿಇಒ

ಗರಂ; ಕಡತ ಪರಿಶೀಲನೆ

ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಗಮನಕ್ಕೆ ತರದೆ ನಿಯಮ ಮೀರಿ ಅಬ್ದುಲ್ ಕಲಾಂ ಸಂಸ್ಥೆಗೆ ಆದೇಶ ಹೊರಡಿಸಿರುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದ ಡಿಡಿಪಿಐ ವಿರುದ್ಧ ಜಿಪಂ ಸಿಇಒ ಮೋನಾ ರೋತ್ ಅವರು ಗರಂ ಆದರು ಎನ್ನಲಾಗಿದೆ. ನನ್ನನ್ನು ಪಾರು ಮಾಡಿ ಎಂದು ಶಾಸಕ ಕೃಷ್ಣಮೂರ್ತಿ ಜೊತೆ ಮಾತನಾಡುವ ವೇಳೆ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಬೇಕಿದ್ದರೆ ಜಿಪಂ ಸಿಇಒರನ್ನು ಕೇಳಿ, ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರು ಅನುಮತಿಗೆ ನನ್ನ ಹಾಗೂ ಸಿಇಒ ಜೊತೆ ಮಾತನಾಡಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆ ತಮ್ಮ ಹೆಸರನ್ನು ಎಳೆತಂದ ಡಿಡಿಪಿಐರನ್ನು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಪರಿಶೀಲನೆ ಹಿನ್ನೆಲೆ ಡಿಡಿಪಿಐ ಹೊರಡಿಸಿರುವ ಆದೇಶ, ಪೋಸ್ಟ್‌ ಮೂಲಕ ಬಿಇಒಗಳಿಗೆ ರವಾನೆಯಾದ ದಿನಾಂಕ, ಸಂಖ್ಯೆ ಮತ್ತು ಕಲಾಂ ಸಂಸ್ಥೆಗೆ ಕಳುಹಿಸಲಾದ ಪತ್ರದ ಸಂಖ್ಯೆ, ದಿನಾಂಕಗಳನ್ನು ವಿವರವಾಗಿ ಪರಿಶೀಲಿಸಿ ಈ ಸಂಬಂಧ ನಕಲು ಪ್ರತಿ ಪಡೆದುಕೊಂಡರು ಎನ್ನಲಾಗಿದೆ.

ಚಾ.ನಗರ ಜಿಲ್ಲೆಯ 5 ಮಂದಿ ಬಿಇಒಗಳ ಸಮ್ಮುಖದಲ್ಲಿಯೇ ನಿಯಮ ಮೀರಿ ಆದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಶೀಘ್ರದಲ್ಲೆ ನಡೆಸಲಾಗುವುದು, ಡಿಡಿಪಿಐ ಅಲ್ಲದೆ ಬಿಇಒಗಳು ಶಾಮೀಲಾಗಿರುವುದು ವಿಚಾರಣೆ ವೇಳೆ ಸಾಬೀತಾದರೆ ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ವಿಚಾರಣಾ ವರದಿ ಸಲ್ಲಿಸಲಾಗುವುದು. ದೂರುದಾರ ನಿರಂಜನ್ ಈ ಸಂಬಂಧ ನೀಡಿರುವ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಪಾಂಡುರಂಗ, ಜಂಟಿ ನಿರ್ದೇಶಕ, ಸಾ.ಶಿ.ಇಲಾಖೆ ಮೈಸೂರು