ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪಿಂಚಣಿದಾರರಿಗೆ ಯಾವುದೇ ಅನಾನುಕೂಲವಾಗಬಾರದು ಎನ್ನುವ ದೃಷ್ಟಿಯಿಂದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದು, ಎಲ್ಲವನ್ನೂ ಪಾರದರ್ಶಕವಾಗಿ ಕಾಣುವಂತೆ ರೂಪಿಸಲಾಗಿದೆ ಎಂದು ಪಿಸಿಡಿಎ ರಾಮಬಾಬು ಹೇಳಿದರು.ನಗರದ ಕಲಾಮಂದಿರದಲ್ಲಿ ಬೆಂಗಳೂರಿನ ರಕ್ಷಣ ಖಾತೆಗಳ ಪ್ರಧಾನ ನಿಯಂತ್ರಕರ ಕಚೇರಿ ವತಿಯಿಂದ ಬುಧವಾರ ನಡೆದ ಪಿಂಚಣಿದಾರರ ಔಟ್ ರಿಚ್ ಕಾರ್ಯಕ್ರಮ ಸ್ಪರ್ಶ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಿವೃತ್ತಿಗೊಂಡ ರಕ್ಷಣಾ ಸಿಬ್ಬಂದಿಯ ಜೀವನವು ಸುಗಮವಾಗಿ ಸಾಗಲು ಬೇಕಾದ ಸೌಲಭ್ಯ ಕಲ್ಪಿಸುವುದು ನಮ್ಮ ಬದ್ಧತೆ. ಆದ್ದರಿಂದ ಪಿಂಚಣಿದಾರರಿಗೆ ಯಾವುದೇ ಅನಾನುಕೂಲ ಆಗಬಾರದು ಎನ್ನುವ ಉದ್ದೇಶದಿಂದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ಹಾಗೆಯೇ ಎಲ್ಲವನ್ನೂ ಪಾರದರ್ಶಕವಾಗಿ ಕಾಣುವಂತೆ ರೂಪಿಸಲಾಗಿದೆ ಎಂದರು.ರಕ್ಷಣ ವಿಭಾಗದಲ್ಲಿ 31 ಲಕ್ಷ ಪಿಂಚಣಿದಾರರು ಇದ್ದಾರೆ. ಡಿಜಿಟಲ್ ಇಂಡಿಯಾದ ಅಂಗವಾಗಿ ಸ್ಪರ್ಶ್ ಪೋರ್ಟೆಲ್ ವಿಸ್ತರಿಸಲಾಗಿದೆ. ಈ ಪೋರ್ಟೆಲ್ ನಲ್ಲಿ ಫಲಾನುಭವಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು. ದಾಖಲೆಯನ್ನು ಅಲ್ಲೇ ಸಲ್ಲಿಸಬಹುದು. ಅರ್ಜಿಯ ಸ್ಥಿತಿಗತಿ ಕೂಡಾ ನೋಡಬಹುದು. ಅಂತಿಮವಾಗಿ ದಾಖಲೆಗಳು ಸಮರ್ಪಕವಾಗಿ ಇದ್ದು, ಪಿಂಚಣಿಗೆ ಅರ್ಹತೆ ಪಡೆದರೆ ಹಣವೂ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ತಲುಪುತ್ತದೆ ಎಂದರು.ಈಗಾಗಲೇ 50 ಸಾವಿರ ಪಿಂಚಣಿದಾರರು ಪೊರ್ಟೇಲ್ ಮೂಲಕ ಸೌಲಭ್ಯ ಪಡೆದುಕೊಂಡಿದ್ದಾರೆ. ಪುಸ್ತಕಗಳಲ್ಲಿ ದಾಖಲೆ ಮಾಡಿಕೊಳ್ಳುವ ವ್ಯವಸ್ಥೆಯಲ್ಲಿ ಇರುವ ಪಿಂಚಣಿದಾರರ ದಾಖಲೆಯನ್ನೂ ಕೂಡಾ ಡಿಜಿಟಲ್ ಗೆ ಪರಿವರ್ತಿಸುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ಹೇಳಿದರು.ಡಿಜಿಟಲ್ ವ್ಯವಸ್ಥೆ ಕುರಿತು ಪಿಂಚಣಿದಾರರು ಆಂತಕ ಪಡುವ ಅಗತ್ಯವಿಲ್ಲ. ನಮ್ಮ ವೈಯಕ್ತಿಕ ದತ್ತಾಂಶ ಹಾಗೂ ನಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ನಾವು ಜೀವಿತಾವಧಿ ದುಡಿದ ಹಣ ಖದೀಮರು ಎಗರಿಸಿಬಿಡುತ್ತಾರೆ ಎಂದು ಭಯ ಬೀಳಬೇಕಾಗಿಲ್ಲ. ಸ್ಪರ್ಶ್ ಪೋರ್ಟೆಲ್ ಅನ್ನು ಅತ್ಯುನ್ನತ ಸೈಬರ್ ಸೆಕ್ಯೂರಿಟಿ ವ್ಯವಸ್ಥೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಯಾರು ಕನ್ನ ಹಾಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.ಸ್ಪರ್ಶ್ ಔಟ್ ರಿಚ್ ಕಾರ್ಯಕ್ರಮವನ್ನು ಪಿಂಚಣಿದಾರರ ಕಷ್ಟ, ದೂರು-ದುಮ್ಮಾನ ಆಲಿಸಲು ಏರ್ಪಡಿಸಲಾಗಿದೆ. ಇಲ್ಲಿ ಬರುವ ಸಲಹೆ- ಸೂಚನೆಯನ್ನು ನಾವು ಅಲಹಬಾದಿನ ಮುಖ್ಯ ಕಚೇರಿಗೆ ಕಳುಹಿಸುತ್ತೇವೆ. ಪಿಂಚಣಿದಾರರು, ನಿವೃತ್ತ ನೌಕರರು ನೀಡುವ ಸಲಹೆಗಳಿಂದ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಬಹುದು. ಎಲ್ಲಿ ಲೋಪವಿದೆ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.ಡಿಎಫ್ಆರ್ಎಲ್ ವಿಜ್ಞಾನಿ ಆರ್. ಕುಮಾರ್, ಕರ್ನಲ್ ಅವಿನ್ ಉತ್ತಯ್ಯ, ಜೆಸಿಡಿಎ ಕೆ. ಸುಬೇರ ರಾಮ್ ಜಯಂತ್ ಇದ್ದರು.