ಸೆಪ್ಟೆಂಬರ್‌ 27 ರಂದು ರೈತರೊಂದಿಗೆ ಸಿಎಂ ಸಭೆ ನಡೆಸದಿದ್ದರೆ ಧರಣಿ: ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌

| Published : Sep 26 2024, 10:17 AM IST

ಸೆಪ್ಟೆಂಬರ್‌ 27 ರಂದು ರೈತರೊಂದಿಗೆ ಸಿಎಂ ಸಭೆ ನಡೆಸದಿದ್ದರೆ ಧರಣಿ: ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.27ರಂದು ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಕೆಡಿಪಿ ಸಭೆ ನಡೆಸಲಿದ್ದು, ಸಭೆಯ ನಂತರ ರೈತರೊಂದಿಗೆ ಸಿಎಂ ಸಭೆ ನಡೆಸಬೇಕು ಇಲ್ಲದಿದ್ದರೆ ಸಿಎಂ ಮನೆ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಎಚ್ಚರಿಕೆ ನೀಡಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.27ರಂದು ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಕೆಡಿಪಿ ಸಭೆ ನಡೆಸಲಿದ್ದು, ಸಭೆಯ ನಂತರ ರೈತರೊಂದಿಗೆ ಸಿಎಂ ಸಭೆ ನಡೆಸಬೇಕು ಇಲ್ಲದಿದ್ದರೆ ಸಿಎಂ ಮನೆ ಮುಂದೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸುತ್ತಿದ್ದರೂ ರೈತರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಕ್ಷಣ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಒತ್ತಾಯಿಸಿ ಹಾಗೂ ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ 4000 ನಿಗದಿಗೆ ಮತ್ತು ಕಾಡು ಪ್ರಾಣಿಗಳ ಹಾವಳಿ ಮತ್ತು ವೈಜ್ಞಾನಿಕ ನಷ್ಟ ಪರಿಹಾರಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಮನೆ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳಲು ಮೈಸೂರಿನ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದ್ದರಿಂದ ಮೈಸೂರಿನಲ್ಲಿ ಕೆಡಿಪಿ ಸಭೆ ನಡೆಸಬೇಕು. ಇಲ್ಲದಿದ್ದರೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಚಾಮರಾಜನಗರ ಮತ್ತು ಮೈಸೂರಿನ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಸ್ತೆ ತಡೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಅಹೋರಾತ್ರಿ ಧರಣಿ ನಡೆಸಿದ ನಂತರ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸಭೆ ನಡೆಸಿದ್ದಾರೆ. ಆದರೆ ಸಮಸ್ಯೆ ಬಗೆಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿರಂತರ ಚಳವಳಿ ನಡೆಸಿದರೂ, ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಮುಖ್ಯಮಂತ್ರಿಗಳ ನಿವಾಸದ ಮುಂದೆ ನಿರಂತರ ನಡೆಸಲು ಇಂದಿನ ಸಭೆಯಲ್ಲಿ ತೀರ್ಮಾನವಾಗಿದ್ದು ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಅಥವಾ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸಲು ಕೋರುತ್ತೇವೆ. ಇಲ್ಲವಾದರೆ ನಿರಂತರ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಮಲಿಯೂರು ಮಹೇಂದ್ರ, ಚಾಮರಾಜನಗರ ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮಂಚಳ್ಳಿ ಮಣಿಕಂಠ, ಮಹದೇವಸ್ವಾಮಿ ಇದ್ದರು.