ಸಾರಾಂಶ
ಮಾನವನ ನಾಗರಿಕತೆಯ ಕೇಂದ್ರ ಬಿಂದು ನಾಟಕ ಎಂದು ರಾಜ್ಯಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ್ ಹೇಳಿದರು.
ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ನಡೆಯುತ್ತಿರುವ ನಿರಂತರ ರಂಗ ಉತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಬದುಕು ಕಲೆಯೂ ಹೌದು, ವಿಜ್ಞಾನವೂ ಹೌದು. ಹಾಗೆಯೇ ರಂಗಭೂಮಿಯೂ ಕೂಡ. ‘ರಂಗಭೂಮಿ’ ಈ ರೂಪದಲ್ಲಿ ಅಲ್ಲದಿದ್ದರೂ ನೇರವಾಗಿ ಮನುಷ್ಯನ ನಾಗರೀಕತೆಯ ಆರಂಭದ ಕೇಂದ್ರಬಿಂದುವೆಂದು ಹೇಳಬಹುದು ಎಂದರು.ಚಿತ್ರಕಲೆ, ಕುಣಿತ, ಹಾಡು ಎಲ್ಲವೂ ಮನುಷ್ಯ ಪೂರ್ವದ್ದು. ನಂತರದಲ್ಲಿ ಇವು ಒಂದು ಕಲಾ ಪ್ರಕಾರವಾಗಿ ಉಳಿದುಕೊಂಡವು. ಆದರೆ ಇವೆಲ್ಲದರ ಕ್ರೂಢಿಕೃತ ರೂಪವೊಂದು ರಂಗಭೂಮಿಯಾಗಿ ಬೆಳೆದು ಕಲೆಯ ಆಚೆಗೆ ತನ್ನ ಕಾರ್ಯವನ್ನು ವಿಸ್ತರಿಸಿಕೊಂಡಿದೆ ಎಂದು ಅವರು ಹೇಳಿದರು
ಇಂದಿನ ಪರಿಸ್ಥಿತಿಯಲ್ಲಿ ಕಲೆಯ ಅಥವಾ ಪ್ರದರ್ಶನ ಕಲೆಯ ವಿಸ್ತೃವಷ್ಟೇ ಅಲ್ಲದೆ, ಜಾಗೃತಿಗಾಗಿ ರಂಗಭೂಮಿ, ಮಾಹಿತಿಗಾಗಿ ರಂಗಭೂಮಿ, ಸಾಮರಸ್ಯಕ್ಕಾಗಿ ರಂಗಭೂಮಿ, ಸಮಗ್ರತೆಗಾಗಿ ರಂಗಭೂಮಿ, ಕೊನೆಯದಾಗಿ ಮನುಷ್ಯನ ಉಳಿವಿಗಾಗಿ ರಂಗಭೂಮಿ ಎಂದರೂ ತಪ್ಪಾಗಲಾರದು. ಸಮಾಜವನ್ನು ಎಚ್ಚರಿಸುವ ಮನುಷ್ಯನ ಸರ್ವತೋಮುಖ ಪ್ರಕ್ರಿಯೆಗಳಲ್ಲಿ ರಂಗಭೂಮಿ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಕಾಣಬಹುದು ಎಂದರು.ನಿರಂತರ ತಂಡವು ಕಳೆದ 30 ವರ್ಷಗಳಿಂದ ತುಂಬ ಜನುಪಯೋಗಿಕೆಲಸಗಳನ್ನು ಮಾಡುತ್ತ ಬಂದಿದೆ. ಬಾಗಲಕೋಟೆಯಲ್ಲಿ ಇವರು ಮಾಡಿದ ಮಳೆ ನೀರು ಕೊಯ್ಲು ಬಹಳ ಮುಖ್ಯವಾದುದ್ದು ನೂರಾರು ಹಳ್ಳಿಗಳನ್ನು ಸುತ್ತಿ ಅವರಿಗೆ ಮಳೆನೀರಿನ ಸಂಗ್ರಹ - ಮತ್ತು ಹರಿವಿನ ಬಗ್ಗೆ ಮಾಡಿದಕೆಲಸ ಶ್ಲಾಘನೀಯ. ಏಕೆಂದರೇ ನಾನು ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದೆ ಎಂದು ಸ್ಮರಿಸಿದರು, ನಿರಂತರದ ಸಂಸ್ಥೆಗಳು ಸಮಾಜಕ್ಕೆ ಹೆಚ್ಚು ಹೆಚ್ಛು ಬೇಕು ಎಂದರು.
ಮತ್ತೊರ್ವ ಅತಿಥಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ,ನಿರಂತರ ಮೈಸೂರಿನ ರಂಗತಂಡಗಳಲ್ಲಿ ಪ್ರಮುಖವಾದುದು. ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಎನ್.ಎಸ್. ವೇಣುಗೋಪಾಲ್, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಶಿವಲಿಂಗಯ್ಯ, ಡಾ.ರೇಖಾ, ವಾಸ್ತುಶಿಲ್ಪಿ ಮೇರಿನಾ, ನಿರಂತರದ ಪ್ರಸಾದ್ ಕುಂದೂರ್, ಶ್ರೀನಿವಾಸು ಪಾಲಹಳ್ಳಿ ಮತ್ತಿತರರು ಇದ್ದರು. ನಿರಂತರದ ಅಧ್ಯಕ್ಷ ಎಂ.ಎಂ. ಸುಗುಣ ಸ್ವಾಗತಿಸಿದರು.ನಂತರ ರಾಯಚೂರು ಸಮುದಾಯ ತಂಡವು ಡಾ. ವಿಕ್ರಮ ವಿಸಾಜಿ ರಚನೆಯ ರಕ್ತ ವಿಲಾಪ ನಾಟಕ ಪ್ರದರ್ಶಿಸಿತು. ನಿರ್ದೇಶನ- ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರದು.
--------