ವೈಚಾರಿಕ ಪ್ರಜ್ಞೆಯ ಬೆಳಕು ಚೆಲ್ಲಿದ ಅಗ್ರಮಾನ್ಯ ಕವಿ ಕುವೆಂಪು

| Published : Dec 30 2024, 01:01 AM IST

ಸಾರಾಂಶ

ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿರುತ್ತಾರೆ. ಕಾಲಕ್ರಮೇಣ ಜಾತಿ, ಧರ್ಮ, ಭೇದ ಭಾವಗಳನ್ನು ಅನುಸರಿಸುವ ಮೂಲಕ ಅಲ್ಪಮಾನವರಾಗುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ವೈಚಾರಿಕ ಪ್ರಜ್ಞೆಯ ಬೆಳಕು ಚೆಲ್ಲಿದ ಅಗ್ರಮಾನ್ಯ ಕವಿ ಕುವೆಂಪು ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ಕುವೆಂಪುನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ನಿಮಿತ್ತ ಕುವೆಂಪುನಗರದಲ್ಲಿರುವ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕುವೆಂಪು ಅವರು ಕನ್ನಡ ಸಾಹಿತ್ಯ ಕಂಡ ಅಪರೂಪದ ವ್ಯಕ್ತಿತ್ವ. ಕನ್ನಡ ಸಾಹಿತ್ಯ ಲೋಕದ ಧೃವತಾರೆಯಾಗಿ ಸದಾ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಹ ಅಗ್ರಮಾನ್ಯ ಕವಿ ಎಂದರು.

ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿರುತ್ತಾರೆ. ಕಾಲಕ್ರಮೇಣ ಜಾತಿ, ಧರ್ಮ, ಭೇದ ಭಾವಗಳನ್ನು ಅನುಸರಿಸುವ ಮೂಲಕ ಅಲ್ಪಮಾನವರಾಗುತ್ತಾರೆ. ಜೀವನದುದ್ದಕ್ಕೂ ವಿಶ್ವ ಮಾನವರಾಗಿರಬೇಕು. ಓ ನನ್ನ ಚೇತನಾ ಆಗು ನೀ ಅನಿಕೇತನ ಎಂದು ತಿಳಿಸುವ ಮೂಲಕ ಯಾರು ಎಂದು ಸಾಧನೆಗೆ, ಚಿಂತನೆಗಳಿಗೆ ಗೋಡೆ ಹಾಕಿಕೊಳ್ಳಬಾರದು. ವಿಶ್ವವ್ಯಾಪಿ ನಮ್ಮ ಸಾಧನೆಗಳು, ಚಿಂತನೆಗಳು, ಕನಸುಗಳು ವ್ಯಾಪಿಸಬೇಕು ಎಂದು ಕುವೆಂಪು ಅವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಕುವೆಂಪುರವರು ತಮ್ಮ ಸಾಹಿತ್ಯದುದ್ದಕ್ಕೂ ಮೌಢ್ಯ, ಕಂದಾಚಾರಗಳ ವಿರುದ್ಧ ತಿಳಿಸುತ್ತಾ, ಸಮಾಜದಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದರು. ನಾಡಗೀತೆಯ ರಚನೆಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ತಿಳಿಸಿದ್ದರು. ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಕುವೆಂಪು ಅವರು ಎಂದೂ ಗಂಡು- ಹೆಣ್ಣು ಎಂಬ ಭೇದವನ್ನು ಮಾಡಲಿಲ್ಲ. ಲಿಂಗ ತಾರತಮ್ಯ ಅವರ ಹತ್ತಿರವೂ ಸುಳಿಯಲಿಲ್ಲ. ಅವರ ಸೃಜನಶೀಲ ಬರಹಗಳು, ಚಿಂತನೆ, ಭಾಷಣ, ಮಾತುಕತೆ, ಬದುಕು, ನಡೆ ಹೀಗೆ ಎಲ್ಲವನ್ನೂ ಆವರಿಸಿಕೊಂಡಿದ್ದ ಅವರ ಒಟ್ಟು ಅಭಿಪ್ರಾಯದಲ್ಲಿ ಮಹಿಳೆ ಎಂದೂ ಉಪೇಕ್ಷೆಗೆ ಒಳಗಾಗಿಲ್ಲ ಎಂದು ಅವರು ತಿಳಿಸಿದರು.

ಸಂಘದ ಅಧ್ಯಕ್ಷ ಡಾ.ಎಲ್. ದೇವೇಗೌಡ, ಕಾರ್ಯದರ್ಶಿ ಚರಣ್ ಶಿವರಾಜ್, ಖಜಾಂಚಿ ಟಿ. ಕೃಷ್ಣಕುಮಾರ್, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜಗೌಡ, ರಮೇಶ್ ರಾಮಪ್ಪ, ಎಂ. ರಮೇಶ್, ಗುಣಶೇಖರ್, ಮಧುರಾಜ್, ಮಹ್ಮದ್ ಫಾರೂಖ್, ಪ್ರೊ. ಗಿರಿಗೌಡ, ಏಕನಾಥ್ ರೈ, ಪಿ. ಜಗದೀಶ್, ಕೆ.ಎನ್. ಸಂತೋಷ್, ಮೋಹನ್, ರಘುರಾಮ್ ಗೌಡ, ಮಹೇಂದ್ರ ಗೌಡ ಮೊದಲಾದವರು ಇದ್ದರು.