ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ. ಕೇವಲ ಓದು ಮಾತ್ರವಲ್ಲದೇ ಇನ್ನಿತರೆ ವಿಚಾರಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ಸಹಕಾರ ಮತ್ತು ಬೆಂಬಲ ನೀಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳ ಮೇಲೆ ಪೋಷಕರ ಪ್ರಭಾವ ಹೆಚ್ಚು ಬೀಳುವುದರಿಂದ ಪೋಷಕರು, ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಮಕ್ಕಳೊಂದಿಗೆ ಬೆರೆತು, ಗುಣಾತ್ಮಕ ನಡವಳಿಕೆಯನ್ನು ಕಲಿಸಬೇಕು ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಕಿವಿಮಾತು ಹೇಳಿದರು.ನಗರದ ಕಲಾಮಂದಿರ ಆವರಣದಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ವತಿಯಿಂದ ಗುರುವಾರ ಆಯೋಜಿಸಿದ್ದ ನೈಪುಣ್ಯೋತ್ಸವ- ಜನಪದ ತೇರು ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ. ಕೇವಲ ಓದು ಮಾತ್ರವಲ್ಲದೇ ಇನ್ನಿತರೆ ವಿಚಾರಗಳಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ಸಹಕಾರ ಮತ್ತು ಬೆಂಬಲ ನೀಡಬೇಕು. ಬೆನ್ನುತಟ್ಟಿ ಪ್ರೋತ್ಸಾಹಿಸಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು ಎಂದರು.ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೂಷಕರು, ಶಿಕ್ಷಕರು ಹಾಗೂ ಸರ್ಕಾರ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ತಮ್ಮ ಪೋಷಕರನ್ನೇ ಮಾದರಿಯಾಗಿ ಸ್ವೀಕರಿಸುತ್ತಾರೆ. ಪೋಷಕರಾಗಿ ನಾವು ಮಕ್ಕಳಿಗೆ ಎಲ್ಲವೂ ಆಗಿರುತ್ತೇವೆ. ನಮ್ಮ ನಡವಳಿಕೆ, ಸ್ವಭಾವವೇ ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಮೊಬೈಲ್, ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚಾಗಿರುವುದರಿಂದ ಅವುಗಳ ಬಗ್ಗೆ ನಿಗಾವಹಿಸಬೇಕು. ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ. ಶಾಲಾ ಹಂತದಲ್ಲಿಯೇ ಅಂಕ, ಶ್ರೇಣಿ, ಪೈಪೋಟಿ ಎಂದು ಮಕ್ಕಳಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಇದು ಅವರ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಮಕ್ಕಳ ಮೇಲೆ ಒತ್ತಡ ಹೇರುವುದು ಬಿಟ್ಟು, ಬಾಲ್ಯವನ್ನು ಅನುಭವಿಸಲು ಅವಕಾಶ ನೀಡಿ ಎಂದು ಅವರು ಕಿವಿಮಾತು ಹೇಳಿದರು.ಶಿಕ್ಷಣ ತಜ್ಞೆ ಡಾ.ಎಲ್. ಸವಿತಾ ಮಾತನಾಡಿ, ಸಮಾಜದಲ್ಲಿ ನೋಡಿದ್ದನ್ನೇ ಮಕ್ಕಳು ಕಲಿಯುತ್ತಾರೆ. ಸಮಾಜದೊಂದಿಗೆ ಮಕ್ಕಳು ಬರೆಯುವ ರೀತಿಯಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಮೇಲೆ ಪೋಷಕರ ಮಾರ್ಕ್ಸ್ ಕಾರ್ಡ್ ಸಿಗುತ್ತದೆ. ಹಾಗಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಎಷ್ಟೇ ಉತ್ತಮ ಪೊಲೀಸ್ ಠಾಣೆ ಇದ್ದರೂ, ಉತ್ತಮ ಆಸ್ಪತ್ರೆಯಿದ್ದರೂ ಮಕ್ಕಳನ್ನು ಅಲ್ಲಿ ಬಿಡುವುದಿಲ್ಲ. ಆದರೆ ಶಾಲೆಗಳಲ್ಲಿ ಶಿಕ್ಷಕರ ಬಳಿಯಲ್ಲಿ ಬಿಟ್ಟು ನಿರಾಳರಾಗುತ್ತೀರಿ. ಶಿಕ್ಷಕ ವೃತ್ತಿಗೆ, ಶಿಕ್ಷಣಕ್ಕೆ ಮಾತ್ರ ಮಕ್ಕಳನ್ನು ತಿದ್ದುವ, ಉತ್ತಮ ಪ್ರಜೆಯನ್ನಾಗಿ ಮಾಡುವ ಶಕ್ತಿ ಇರುತ್ತದೆ ಎಂದರು.ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಹಾಸನ ರಘು ಅವರಿಗೆ ನೈಪುಣ್ಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೈಪುಣ್ಯ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಆರ್. ರಘು, ಕಾರ್ಯದರ್ಶಿ ಆರ್. ಕೌಟಿಲ್ಯ, ಪ್ರಾಂಶುಪಾಲರಾದ ಮಹೇಂದ್ರ, ಶಾಲಿನಿ ಇದ್ದರು.ರಘುಲೀಲಾ ಸಂಗೀತ ಶಾಲೆಯ ಸುನೀತಾ ಚಂದ್ರಕುಮಾರ್ ನಿರ್ದೇಶನದಲ್ಲಿ ದಟ್ಟಗಳ್ಳಿ ಕ್ಯಾಂಪಸ್‌ನ ಸಿಬಿಎಸ್‌ಇ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳು ಜನಪದ ಸಂಗಮ ಕಾರ್ಯಕ್ರಮ ನಡೆಸಿಕೊಟ್ಟರು.
----------------eom/mys/dnm/