ಕುಡಿಯುವ ನೀರಿನ ಯೋಜನೆಗೆ ಮೀಸಲಾದ ಬಂಡೂರಿ ನಾಲಾ ಕಾಮಗಾರಿ ಪ್ರಾರಂಭಿಸಲು ಡಿ.11ರಂದು ಪರವಾನಗಿ ಸಿಗುವ ಸಾಧ್ಯತೆ ಇದೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಹುಬ್ಬಳ್ಳಿ:

ಕುಡಿಯುವ ನೀರಿನ ಯೋಜನೆಗೆ ಮೀಸಲಾದ ಬಂಡೂರಿ ನಾಲಾ ಕಾಮಗಾರಿ ಪ್ರಾರಂಭಿಸಲು ಡಿ.11ರಂದು ಪರವಾನಗಿ ಸಿಗುವ ಸಾಧ್ಯತೆ ಇದೆ. ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಗಳೂರಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆದ ವೇಳೆ ಅಧಿಕಾರಿಗಳಿಂದ ಈ ವಿಶ್ವಾಸ ವ್ಯಕ್ತವಾಗಿದೆ. ಅಂದಿನ ಸಭೆಯಲ್ಲಿ ಪೂರಕ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಅನುಮತಿ ಸಿಗದಿದ್ದಲ್ಲಿ ನಿರಂತರ ಹೋರಾಟ ಮುಂದುವರಿಸುವುದಾಗಿ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ ಮತ್ತು ಮಹದಾಯಿಗಾಗಿ ಡಿ. 1ರಿಂದ ದೆಹಲಿಯ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಆದರೆ, ದೆಹಲಿಯಲ್ಲಿ ಹವಾಮಾನ ಏರುಪೇರು, ವಿಪರೀತ ಚಳಿ ಇರುವುದರಿಂದ ಹೋರಾಟವನ್ನು ಬೆಂಗಳೂರಿನ ಕೋರಮಂಗಲದ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಾದೇಶಿಕ ಕಚೇರಿ ಎದುರು ಡಿ. 2ರಂದು ನಡೆಸಲಾಗಿತ್ತು. ಆಗ ಡೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಫಾರೆಸ್ಟ್‌ ಅಧಿಕಾರಿ ಪ್ರಣಿತಾ ಆರ್‌. ಕೇಂದ್ರದ ಮುಖ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಕುಡಿಯುವ ನೀರಿನ 2.18 ಟಿಎಂಸಿ ಕುರಿತು ಡಿ.11 ರಂದು ಸಭೆ ಮಾಡಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.ಈ ವೇಳೆ ಅರಣ್ಯ, ನೀರಾವರಿ ಹಾಗೂ ರೈತರನ್ನು ಕರೆಯಿಸಿ ಸಭೆ ಮಾಡಬೇಕು ಎಂದು ಪಟ್ಟು ಹಿಡಿದಾಗ ಇದಕ್ಕೆ ಒಪ್ಪಿದ್ದಾರೆ. ಡಿ.11ರ ಸಭೆಯಲ್ಲಿ ನಮ್ಮ ಪರವಾಗಿ ನಿರ್ಣಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಆಗದಿದ್ದಲ್ಲಿ ಬೆಂಗಳೂರಿನ ಕೇಂದ್ರ ಸರ್ಕಾರದ ಕಚೇರಿ ಎದುರು ನಿರಂತರ ಧರಣಿ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಆಲೇಕರ, ರಾಜ್ಯ ವಕ್ತಾರ ಗುರು ರಾಯನಗೌಡ್ರ, ಬಸವರಾಜ ಗುಡಿ ಸೇರಿದಂತೆ ಇತರರು ಇದ್ದರು.