ಕಲಾಸಾಧಕ ಸಂಗಮ; ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ದೇಶದ ಇತಿಹಾಸ, ಕಲೆ, ಸಂಸ್ಕೃತಿ ಪ್ರದರ್ಶನ

| Published : Jan 30 2024, 02:02 AM IST

ಕಲಾಸಾಧಕ ಸಂಗಮ; ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ದೇಶದ ಇತಿಹಾಸ, ಕಲೆ, ಸಂಸ್ಕೃತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾಸಾಧಕ ಸಂಗಮ; ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ದೇಶದ ಇತಿಹಾಸ, ಕಲೆ, ಸಂಸ್ಕೃತಿ ಪ್ರದರ್ಶನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಸ್ಕಾರ ಭಾರತೀ ಸಂಸ್ಥೆಯು ಫೆ.1ರಿಂದ 4ರವರೆಗೆ ‘ಸಾಮರಸ್ಯತೆ’ ಪರಿಕಲ್ಪನೆಯಲ್ಲಿ ‘ಅಖಿಲ ಭಾರತೀಯ ಕಲಾಸಾಧಕ ಸಂಗಮ-2024’ ಅನ್ನು ನಗರದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಿದೆ.

ನಗರದ ರಾಷ್ಟ್ರೋತ್ಥಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಲಾ ಭಾರತೀ ಸಂಸ್ಥೆಯ ಅಖಿಲ ಭಾರತ ಮಹಾಮಂತ್ರಿ ಅಶ್ವಿನ್ ದಳ್ವಿ, ಫೆ.1ರಂದು ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಂಜಮ್ಮ ಜೋಗತಿ, ಲೇಖಕ ವಿಕ್ರಂ ಸಂಪತ್, ತಬಲಾ ವಿದ್ವಾಂಸ ರವೀಂದ್ರ ಯಾವಗಲ್ ಉಪಸ್ಥಿತರಿರುತ್ತಾರೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ 2,500 ಜನ ಸಂಗೀತ, ಸಾಹಿತ್ಯ, ನೃತ್ಯ ಸೇರಿದಂತೆ ವಿವಿಧ ಕಲಾ ಸಾಧಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ದೇಶದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ವಸ್ತು ಪ್ರದರ್ಶನ ಇದೆ. ವಿಚಾರ ಸಂಕಿರಣಗಳು ನಡೆಯಲಿವೆ ಎಂದು ತಿಳಿಸಿದರು.

ಸಾಮರಸ್ಯತೆಯ ಶೋಭಾಯಾತ್ರೆ ನಡೆಯಲಿದೆ. ಪ್ರಥಮ ಬಾರಿಗೆ ಇಬ್ಬರು ಕಲಾ ಸಾಧಕರಿಗೆ ₹1.5 ಲಕ್ಷ ನಗದು ಬಹುಮಾನ ಇರುವ ‘ಭರತ ಮುನಿ’ ಪ್ರಶಸ್ತಿಯನ್ನು ಫೆ.3ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಭಾರತದ ಶ್ರೀಮಂತ ಇತಿಹಾಸ ಅರಿಯಲು, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಕಲಾಕ್ಷೇತ್ರದ ಉದ್ಧಾರಕ್ಕಾಗಿ ದಕ್ಷಿಣ ಭಾರತದಲ್ಲೇ ಮೊದಲಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮಾರಂಭ ವಿಭಿನ್ನವಾಗಿರಲಿದೆ ಎಂದು ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಭಾರತದ ಅಧ್ಯಕ್ಷ ಸುಚೇಂದ್ರ ಪ್ರಸಾದ್ ತಿಳಿಸಿದರು.

ಫೆ.4ರಂದು ಸಮಾರೋಪ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಮತ್ತು ಆಧ್ಯಾತ್ಮ ಗುರು ರವಿಶಂಕರ್ ಅವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.