ಸಾರಾಂಶ
ಬೆಂಗಳೂರಿನ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಡಾನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ ಮತ್ತು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಕಲಾಶ್ರಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೆಂಗಳೂರಿನ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ತನ್ನ 20ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಹಿರಿಯ ಸಂಗೀತಪ್ರೇಮಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ಹಾಗೂ ವಿದ್ಯಾಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಶಾಸ್ತ್ರಿ ಅವರನ್ನು ‘ಕಲಾಶ್ರಯ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ರಾಜಧಾನಿ ಜಯನಗರ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಮಣ್ಯ ಶಾಸ್ತ್ರಿ ಅವರು, ಮಕ್ಕಳ ಸಮಗ್ರ ವಿಕಸನಕ್ಕೆ ಶಾಸ್ತ್ರೀಯ ಸಂಗೀತ ಪೂರಕವಾಗಿದೆ ಎಂದು ಹೇಳಿದರು.
ಬಾಲ್ಯದಲ್ಲಿಯೇ ಮನೆಯಲ್ಲಿ ಸಂಗೀತ, ಸಾಹಿತ್ಯ, ವೇದ ಮತ್ತು ಯೋಗದ ಪರಿಚಯವಾದರೆ ಅಂತಹ ವಿದ್ಯಾರ್ಥಿ ನಾಳೆ ನಮ್ಮ ದೇಶದ ಜವಾಬ್ದಾರಿಯುತ ಪ್ರಜೆಯಾಗುತ್ತಾನೆ. ಸಂಗೀತವು ಏಕಕಾಲದಲ್ಲಿ ಮಕ್ಕಳಿಗೆ ಸಾಹಿತ್ಯ, ರಾಗ, ತಾಳ, ಶ್ರುತಿಗಳ ಪರಿಚಯ ಮಾಡಿಕೊಡುತ್ತದೆ. ಇದರಿಂದ ಮಕ್ಕಳ ಐಕ್ಯೂ ವೃದ್ಧಿಸಿ ಶಾಲಾ ಪಠ್ಯಕ್ರಮದ ಅಧ್ಯಯನಕ್ಕೂ ಪುಷ್ಟಿ ನೀಡುತ್ತದೆ. ಹೀಗಾಗಿ ಮಕ್ಕಳಿಗೆ ಯಾವುದಾದರೂ ಒಂದು ಭಾರತೀಯ ಮೂಲದ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪಾಲಕರು ಪ್ರೇರಣೆ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.ಉಡುಪಿ ಹಿರಿಯ ಸಂಗೀತ ತಜ್ಞ ಅರವಿಂದ ಹೆಬ್ಬಾರ್ ಮಾತನಾಡಿ, ಕಳೆದ 7 ದಶಕದಿಂದ ಸಾವಿರಾರು ಸಂಗೀತ ಕಚೇರಿ ಆಯೋಜನೆ, ಸಂಘಟನೆ ಮತ್ತು ಕಲಾ ಪೋಷಣೆ ಮಾಡಿರುವ ಶಾಸ್ತ್ರಿ ಅವರಿಗೆ ಕಲಾಶ್ರಯ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್, ನಾಗರತ್ನಾ ಹೆಬ್ಬಾರ್, ಮೃದಂಗ ವಿದ್ವಾನ್ ನಿಕ್ಷಿತ್ ಪುತ್ತೂರು, ಸಂಗೀತ- ನೃತ್ಯ ಕಲಾ ವಿದುಷಿ ವೈ. ಜಿ. ಶ್ರೀ ಲತಾ, ಶಾಂತ ಲಕ್ಷ್ಮೀ ಶಾಸ್ತ್ರೀ ಮತ್ತು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಿರಿಯ ವಿದುಷಿ ವೈ. ಜಿ . ಪರಿಮಳಾ ಹಾಜರಿದ್ದರು.