ಸಾರಾಂಶ
ಬೆಂಗಳೂರು : ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಕೆ.ಜಿ.ಹಳ್ಳಿಯಿಂದ ನಾಗವಾರ ನಿಲ್ದಾಣದವರೆಗೆ ಸುರಂಗ ಕೊರೆಯುತ್ತಿದ್ದ ತುಂಗಾ ಟಿಬಿಎಂ ತನ್ನ ಕೆಲಸ ಮುಗಿಸಿ ಹೊರಬಂದಿದೆ. ತನ್ಮೂಲಕ ಈ ಮಾರ್ಗದ ಸುರಂಗ ಕೊರೆವ ಕಾಮಗಾರಿ ಶೇಕಡ 98ರಷ್ಟು ಮುಗಿದಂತಾಗಿದ್ದು, ಭದ್ರಾ ಟಿಬಿಎಂ ತನ್ನ ಕೆಲಸ ಮುಂದುವರಿಸಿದೆ.
ನಾಗವಾರ ನಿಲ್ದಾಣದ ಕಟ್ ಮತ್ತು ಕವರ್ ಶಾಫ್ಟ್ ನಲ್ಲಿ ತುಂಗಾ ಟಿಬಿಎಂ 936.6 ಮೀ. ಪೂರ್ಣ ಸುರಂಗ ಕೊರೆದು ಹೊರ ಬಂದಿದೆ. ಬರೋಬ್ಬರಿ ಎಂಟು ತಿಂಗಳ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಯಂತ್ರ ಕಾಡುಗೊಂಡನಹಳ್ಳಿ ನಿಲ್ದಾಣದಲ್ಲಿ ಫೆ. 3ರಂದು ಕಾಮಗಾರಿ ಪ್ರಾರಂಭ ಮಾಡಿತ್ತು.
ಒಟ್ಟಾರೆ ಗುಲಾಬಿ ಮಾರ್ಗದಲ್ಲಿ ಡೇರಿ ಸರ್ಕಲ್‌ನಿಂದ ನಾಗವಾರವರೆಗಿನ 20,992 ಮೀ. ಸುರಂಗ ಮಾರ್ಗದಲ್ಲಿ 20,582.7 ಮೀ ಅಂದರೆ ಶೇ.98ರಷ್ಟು ಪೂರ್ಣಗೊಂಡಿದೆ. ಸುರಂಗ ಕಾಮಗಾರಿಗೆ ನಿಯೋಜನೆಗೊಂಡಿದ್ದ 9 ಟಿಬಿಎಂಗಳಲ್ಲಿ, ಇಲ್ಲಿವರೆಗೆ 8 ಟಿಬಿಎಂಗಳು ಕಾಮಗಾರಿ ಪೂರ್ಣಗೊಳಿಸಿದೆ.
ಕೆಲಸ ನಿರ್ವಹಿಸುತ್ತಿರುವ ಭದ್ರಾ ಟಿಬಿಎಂ ಈ ವರ್ಷ ನವೆಂಬರ್ ಅಂತ್ಯಕ್ಕೆ ಕೆಲಸ ಮುಗಿಸುವ ನಿರೀಕ್ಷೆಯಿದೆ. ಸದ್ಯ ಭದ್ರಾ ಟಿಬಿಎಂ ಶೇ.50ಕ್ಕೂ ಹೆಚ್ಚಿನ ಕೆಲಸ ಮುಗಿಸಿದೆ. ಇನ್ನು, ಸುರಂಗ ಕೊರೆಯುವ ಕೆಲಸ ಪೂರ್ಣವಾದ ಕಡೆ ಹಳಿ ಅಳವಡಿಕೆಗೆ ಅಗತ್ಯವಿರುವ ಕೆಲಸ ಸೇರಿ ಉಳಿದ ಸಿವಿಲ್ ಕಾಮಗಾರಿ ನಡೆಯುತ್ತಿದೆ. ಸುರಂಗ ಮಾರ್ಗದಲ್ಲಿ ತಾವರೆಕೆರೆಯಿಂದ- ನಾಗವಾರದ ಕಡೆ ಶೇ.11ರಷ್ಟು ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ, ತಾವರೆಕೆರೆಯಿಂದ ಕಾಳೇನ ಅಗ್ರಹಾರ ಕಡೆ ಎಲಿವೆಟೆಡ್ ಕಾಮಗಾರಿಯಲ್ಲಿ (ಎತ್ತರಿಸಿದ ಮಾರ್ಗ) ಶೇ.62ರಷ್ಟು ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ ಪೂರ್ಣಗೊಂಡಿದೆ.
ಸುರಂಗ, ಎತ್ತರಿಸಿದ ಮಾರ್ಗದಲ್ಲಿ ಸುಮಾರು 18 ನಿಲ್ದಾಣ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. 2025ರ ಅಂತ್ಯಕ್ಕೆ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.