ಸಾರಾಂಶ
೧೨ ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆ ಹೊತ್ತಿನಲ್ಲಿ ವೇಣೂರಿಗೆ ದೊರಕುವ ಪ್ರಾಶಸ್ತ್ಯ, ಅಭಿವೃದ್ಧಿ, ಧನ ಸಹಾಯದಲ್ಲಿ ಕಿಂಚಿತ್ತಾದರೂ ಗೊಮ್ಮಟನನ್ನು ಕೆತ್ತಿದ ಮೂಲ ಸ್ಥಳಕ್ಕೆ, ಗೊಮ್ಮಟನನ್ನು ಕೆತ್ತಿ ದೈವಗಳಾದ ಕಲ್ಕುಡ, ಕೊಡಮಣಿತ್ತಾಯಗಳ ದೈವಸ್ಥಾನಕ್ಕೆ ಸಿಕ್ಕಿದ್ದಿದ್ದರೂ ಕಲ್ಯಾಣಿ ಕ್ಷೇತ್ರದ ಏಳಿಗೆ, ಬೆಳವಣಿಗೆಗೆ ಮಹತ್ತರ ಕೊಡುಗೆ ದೊರೆತಂತಾಗುತ್ತಿತ್ತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
1604ರಲ್ಲಿ ವೇಣೂರಿನಲ್ಲಿ ಸ್ಥಾಪಿತವಾಗಿರುವ ಮೋಕ್ಷಗಾಮಿ ಭಗವಾನ್ ಶ್ರೀ ಬಾಹುಬಲಿಯ ಮೂರ್ತಿಗೆ ಇದೀಗ 21 ನೇ ಶತಮಾನದ ಮೂರನೇ ಮಸ್ತಕಾಭಿಷೇಕ ಸಂಪನ್ನಗೊಳ್ಳುತ್ತಿದೆ. ಇದೇ ವೇಳೆ ವೇಣೂರಿನ ಮೂರ್ತಿಯನ್ನು ಕೆತ್ತಿರುವ ಜಾಗವೊಂದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಸೂಕ್ತ ಪ್ರವಾಸೀ ತಾಣವಾಗಬೇಕಾಗಿರುವ ವೇಣೂರು ಸಮೀಪದ ಕಲ್ಹಾಣಿಗೆ ಅಭಿವೃದ್ಧಿಯ ಅಭಿಷೇಕ ಯಾವಾಗ ಎಂದು ಕೇಳುವಂತಾಗಿದೆ.ವೇಣೂರಿನ 35 ಅಡಿ ಎತ್ತರದ ಏಕಶಿಲಾ ಬಿಂಬವನ್ನು ಕೆತ್ತಿದ್ದಕ್ಕೆ ಸಾಕ್ಷಿಯಾಗಿ ಬಂಡೆಯೊಂದು ವೇಣೂರಿನಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ವೇಣೂರಿನ ಐಟಿಐ ಬಳಿಯ ಅಳದಂಗಡಿಗೆ ಹೋಗುವ ರಸ್ತೆಯಲ್ಲಿ ಪೆರ್ಮುಡ ಕಂಬಳದ ಸ್ಥಳವನ್ನು ದಾಟಿದ ಮೇಲೆ ಬಾಹುಬಲಿಯನ್ನು ರಚಿಸಿದ ಜಾಗ ನೋಡಲು ಸಿಗುತ್ತದೆ. ಕಲ್ಕುಡ, ಕರ್ಲುಟ್ಟಿ, ಕಾಳಮ್ಮ, ರಾಜನದೈವ, ಕೊಡಮಣಿತ್ತಾಯ ಸಾನಿಧ್ಯವಿರುವ, ಕಲ್ಕುಡ ಮಾಯವಾಗಿರುವ ಪ್ರಕೃತಿ ರಮಣೀಯತೆಯುಳ್ಳ ಎತ್ತರದಲ್ಲಿರುವ ಕ್ಷೇತ್ರವಿದು. ಇಲ್ಲಿಗೆ ಕಲ್ಹಾಣಿ (ಕಲ್ಯಾಣಿ) ಎಂದು ಕರೆಯುತ್ತಾರೆ.
ಗೊಮ್ಮಟನನ್ನು ಬೃಹತ್ ಬಂಡೆಗೆ ಚಾಣ್ಯವಿಟ್ಟು ಕೆತ್ತಲಾಗಿದೆ. ಇದಕ್ಕೆ ಅಲ್ಲಿ ಇಂದಿಗೂ ಲಭ್ಯವಿರುವ ಕುರುಹು ಉಳಿಯಿಂದ ಕಲ್ಲನ್ನು ತುಂಡರಿಸಿದ ಗುರುತು, ಉಳಿ ಕಾಯಿಸಿ ಬಿಸಿ ಮಾಡಿ ಉಳಿದ ಕಬ್ಬಿಣದ ಚೂರಿನ ಪಳೆಯುಳಿಕೆಗಳೇ ಸಾಕ್ಷಿ. ಇಂದಿನ ಆಧುನಿಕ ಯಂತ್ರಗಳೂ ಕತ್ತರಿಸಲು ಸಾಧ್ಯವಾಗದ ಬೃಹತ್ ಗಾತ್ರದ ಬಂಡೆಗಳ ಕೆತ್ತನೆ, ಕಲಾತ್ಮಕವಾಗಿರುವ ಒಂದೇ ಅಳತೆಯ ಅನೇಕ ಬಂಡೆಗಳ ರಾಶಿ ಇಲ್ಲಿದೆ. ಶಿಲ್ಪಿಗಳು ಆಹಾರ ತಯಾರಿಸಲು ಮಾಡಿಕೊಂಡಿದ್ದ ಒಲೆಯ ಕುರುಹು, ರುಬ್ಬಲು ಮಾಡಿದ್ದ ಬೃಹತ್ ಕಡೆಗಲ್ಲಿನಂತಹ ರಚನೆಯನ್ನು ಈಗಲೂ ಕಾಣಬಹುದು. ಅಂದಿನ ಕಾಲದಲ್ಲಿ ನೀರಿಗಾಗಿ ಮಾಡಿದ್ದ ಸುಮಾರು ೬ ಅಡಿ ಆಳದ ಕಲ್ಯಾಣಿ/ ಕೆರೆ ಇಂದಿನ ಕಾಲದ ಬಿರು ಬೇಸಗೆಯಲ್ಲಿಯೂ ತುಂಬಿರುತ್ತದೆ. ಅಷ್ಟೇ ಅಲ್ಲ ತಗ್ಗು ಪ್ರದೇಶದಲ್ಲಿದ್ದರೂ ಸುಮಾರು ೨೦೦ ಮೀಟರ್ ದೂರದಲ್ಲಿ ತುಸು ಎತ್ತರದಲ್ಲಿರುವ ದೇವಸ್ಥಾನದ ತೊಟ್ಟಿಗೆ ಸರಾಗವಾಗಿ ನೀರು ಹರಿದು ಬರುತ್ತಿದೆ. ಹೀಗೆ ಹುಡುಕುತ್ತಾ ಹೋದರೆ ಇನ್ನಷ್ಟು ಮಾಹಿತಿಗಳು ಖಂಡಿತವಾಗಿಯೂ ದೊರೆಯಬಹುದು. ಇತಿಹಾಸತಜ್ಞರು, ಅಧ್ಯಯನಕಾರರು ಅಧ್ಯಯನ ನಡೆಸಬೇಕಿದೆ.ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಿದು: ೧೨ ವರ್ಷಗಳಿಗೊಮ್ಮೆ ಅತ್ಯಂತ ವಿಜೃಂಭಣೆಯಿಂದ ಬಾಹುಬಲಿಯ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಆ ಹೊತ್ತಿನಲ್ಲಿ ವೇಣೂರಿಗೆ ದೊರಕುವ ಪ್ರಾಶಸ್ತ್ಯ, ಅಭಿವೃದ್ಧಿ, ಧನ ಸಹಾಯದಲ್ಲಿ ಕಿಂಚಿತ್ತಾದರೂ ಗೊಮ್ಮಟನನ್ನು ಕೆತ್ತಿದ ಮೂಲ ಸ್ಥಳಕ್ಕೆ, ಗೊಮ್ಮಟನನ್ನು ಕೆತ್ತಿ ದೈವಗಳಾದ ಕಲ್ಕುಡ, ಕೊಡಮಣಿತ್ತಾಯಗಳ ದೈವಸ್ಥಾನಕ್ಕೆ ಸಿಕ್ಕಿದ್ದಿದ್ದರೂ ಕಲ್ಯಾಣಿ ಕ್ಷೇತ್ರದ ಏಳಿಗೆ, ಬೆಳವಣಿಗೆಗೆ ಮಹತ್ತರ ಕೊಡುಗೆ ದೊರೆತಂತಾಗುತ್ತಿತ್ತು. ಇಲ್ಲಿರುವ ಪ್ರಾಚೀನ ಪಳೆಯುಳಿಕೆ, ಐತಿಹಾಸಿಕ ದಾಖಲೆಗಳ ಅಧ್ಯಯನದ ಜೊತೆಗೆ ಅವುಗಳ ರಕ್ಷಣೆಯ ಅನಿವಾರ್ಯತೆಯಿದೆ. ವೇಣೂರಿನ ಗೊಮ್ಮಟನನ್ನು ವೀಕ್ಷಿಸಲು ಆಗಮಿಸುವ ಭಕ್ತರು, ಪ್ರವಾಸಿಗರೂ ವೇಣೂರಿನಿಂದ ಕೇವಲ ೬ ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೂ ಬರುವಂತಾಗಬೇಕು. ಅವರಿಗೂ ಆ ಬೃಹತ್ ಗೊಮ್ಮಟ ಕೆತ್ತಿದ ಸ್ಥಳದ ಅನಾವರಣವಾಗಬೇಕು. ಅಂಥ ಬೃಹತ್ ಪ್ರತಿಮೆಯನ್ನು ಆಧುನಿಕ ಕಾಲದ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅತ್ಯಮೋಘವಾಗಿ ಕೆತ್ತಿದ್ದ ಆದರೆ ತೆರೆಮರೆಯಲ್ಲಿಯೇ ಉಳಿದಿರುವ ಕಲ್ಕುಡ ಕೊಡಮಣಿತ್ತಾಯ ದೈವಗಳ ಪರಿಚಯ ಎಲ್ಲರಿಗೂ ಆಗಬೇಕು.ಶಾಸಕರುಗಳು, ಪುರಾತತ್ವ ಇಲಾಖೆಯವರು, ಕರ್ನಾಟಕ ಇತಿಹಾಸ ಅಕಾಡೆಮಿ, ಜಿಲ್ಲಾಡಳಿತ ಮತ್ತು ಇತಿಹಾಸಕಾರರು ಇತ್ತ ಗಮನಹರಿಸುವ ಅಗತ್ಯವಿದೆ.
ಜನಪ್ರತಿನಿಧಿಗಳು ಮನಸ್ಸು ಮಾಡಬೇಕು: ಅತ್ಯಂತ ಪ್ರಾಚೀನ, ಐತಿಹಾಸಿಕ ಸ್ಥಳ ನಮ್ಮ ಗ್ರಾಮದಲ್ಲಿರುವುದು ನಮಗೆಲ್ಲ ಹೆಮ್ಮೆಯ ವಿಚಾರ. ಇದನ್ನು ಪ್ರವಾಸೋದ್ಯಮದ ನೆಲೆಯಲ್ಲಿ ಅಭಿವೃದ್ಧಿ ಪಡಿಸಿದರೆ ಐತಿಹಾಸಿಕ ದಾಖಲೆಯೊಂದು ಮುಂದುವರಿಯುತ್ತದೆ. ಬಾಹುಬಲಿ ಕೆತ್ತಿದ ಜಾಗದಲ್ಲಿ ಸ್ಮಾರಕವೊಂದು ನಿರ್ಮಿಸುವಲ್ಲಿ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಎನ್ನುತ್ತಾರೆ ಕಲ್ಹಾಣಿ ಕ್ಷೇತ್ರದ ಮುಖ್ಯಸ್ಥ ಪ್ರಸನ್ನ ಹೆಬ್ಬಾರ್.