ಸಾರಾಂಶ
ಬೀದರ್: ಹಿಂಗಾರು ಬೆಳೆ ಇನ್ನೂ ಕೈಗೆ ಬಂದಿಲ್ಲ, ನವೆಂಬರ್‌ನಲ್ಲಿಯೇ ಕಬ್ಬು ಕಾರ್ಖಾನೆಗೆ ಸಾಗಿಸಿದ್ದರೂ ಹಣ ಪಾವತಿಯಾಗಿಲ್ಲ. ಕೈಯಲ್ಲಿ ಕಾಸಿಲ್ಲ. ಇಂಥ ಸಂಕಷ್ಟದ ಸಂದರ್ಭದಲ್ಲಿ ಸಾಲ ಮರುಪಾವತಿ ಕಷ್ಟ. ಹೀಗಾಗಿ ರಾಜ್ಯ ಸರ್ಕಾರ ರೈತರ ಕೃಷಿಯೇತರ ಸಾಲದ (ಎಂ.ಟಿ ಸಾಲ) ಬಡ್ಡಿ ಮನ್ನಾದ ಯೋಜನೆಯ ಅವಧಿ ಎಪ್ರಿಲ್ ತಿಂಗಳಾಂತ್ಯದವರೆಗೆ ವಿಸ್ತರಿಸುವಂತೆ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಮಂಗಳವಾರ ರೈತ ಸಂಘಧ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರೈತರ ಕೃಷಿಯೇತರ ಸಾಲದ (ಎಂ.ಟಿ ಸಾಲ) ಬಡ್ಡಿ ಮನ್ನಾ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಅದಕ್ಕೆ ಫೆ.28ರ ಗಡುವು ನೀಡಿರುವದು ಸರಿಯಲ್ಲ. ಸದ್ಯ ರೈತನ ಬಳಿ ಬಡ್ಡಿ ಪಾವತಿಸಲು ಹಣವಿಲ್ಲ. ಕಬ್ಬಿನ ಬೆಳೆ ಬಾಕಿ ಪಾವತಿ ಸಿಗುತ್ತಿದ್ದಂತೆ ಅಸಲು ಪಾವತಿಸಿ ಸಾಲದಿಂದ ಮುಕ್ತಿಯಾಗಬಹುದು ಎಂದರು.ಈಗಾಗಲೇ ಬರ ಘೋಷಣೆಯಾಗಿದೆ. ರಾಜ್ಯದಿಂದಾಗಲಿ ಕೇಂದ್ರದಿಂದಾಗಲಿ ಬರ ಪರಿಹಾರ ಬಂದಿಲ್ಲ. ಮೂರು ತಿಂಗಳಾದರೂ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬಾಕಿ ಪಾವತಿಸಿಲ್ಲ. ಕಬ್ಬು ಕಾರ್ಖಾನೆಗೆ ಸಾಗಿಸಿದ 15 ದಿನಗಳ ನಂತರ ಪಾವತಿಗೆ ಸರ್ಕಾರದ ಸೂಚನೆಯಂತೆ ವಾರ್ಷಿಕ ಶೇ.14ರ ಬಡ್ಡಿ ದರವನ್ನು ರೈತರಿಗೆ ಪಾವತಿಸಬೇಕು. ಆದರೆ ಅದ್ಯಾವುದೂ ಇಲ್ಲಿ ಆಗೋಲ್ಲ. ರೈತ ಬ್ಯಾಂಕಿಗೆ ಸೂಕ್ತ ಸಮಯದಲ್ಲಿ ಸಾಲ ಪಾವತಿಸದಿದ್ದಲ್ಲಿ ಬಡ್ಡಿ, ಚಕ್ರ ಬಡ್ಡಿಗೆ ಒಳಗಾಗುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಕಬ್ಬಿನ ಬಾಕಿ ಪಾವತಿಸುವುದಕ್ಕೆ ಸಕ್ಕರೆ ಮಾರಾಟ ವಿಳಂಬ ಕಾರಣವಾದರೆ ಬ್ಯಾಂಕ್‌ನಲ್ಲಿ ಸಕ್ಕರೆ ಒತ್ತೆಯಿಟ್ಟು ಬಾಕಿ ಪಾವತಿಸಬಹುದು ಆದರೆ ಕಾರ್ಖಾನೆಯವರು ಸಕ್ಕರೆ ಒತ್ತೆಯಿಟ್ಟು ಅದರ ಬಡ್ಡಿಯನ್ನು ಭರಿಸುವದರಿಂದ ಹಿಂದೇಟು ಹಾಕುತ್ತಾರೆ ಇದರಿಂದಾಗಿ ನಾವು ಸಂಕಷ್ಟಕ್ಕೆ ನೂಕಲ್ಪಡುತ್ತಿದ್ದೇವೆ ಎಂದರು.ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಯತ್ನಿಸದ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸುವದಲ್ಲದೆ ರೈತರ ಕಬ್ಬಿನ ಬಾಕಿ ಪಾವತಿಸುವಲ್ಲಿ ವಿಳಂಬ ನೀತಿ ಹೀಗೆಯೇ ಮುಂದುವರೆಸಿದ್ದೆಯಾದಲ್ಲಿ ಜಿಲ್ಲೆಯ 600 ಗ್ರಾಮಗಳು, 25 ಸರ್ಕಲ್‌ಗಳು ಸೇರಿದಂತೆ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ರೈತರು ಹಮ್ಮಿಕೊಳ್ಳಲಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಖಾನೆಗಳಿಗೆ ಬಾಕಿ ಪಾವತಿಗಾಗಿ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ವೀರಾರೆಡ್ಡಿ ಪಾಟೀಲ್ ಮಾತನಾಡಿ, ರೈತರಿಗೆ ಸಂಕಷ್ಟ ನಿತ್ಯವೂ ಹೆಚ್ಚುತ್ತಿದ್ದು, ಸರ್ಕಾರದ ಖರೀದಿ ಕೇಂದ್ರಗಳು ಕಡಿಮೆಯಾಗುತ್ತ ಅಲ್ಲಿ ಅಕ್ರಮ ತಾಂಡವಾಡಲಾರಂಭಿಸುತ್ತದೆ. ಪ್ರತಿಯೊಂದು ಪಿಕೆಪಿಎಸ್‌ನಲ್ಲಿ ಖರೀದಿ ಕೇಂದ್ರ ಕಡ್ಡಾಯವಾಗಿ ನಡೆದು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.ಸರ್ವೋದಯ ಪಕ್ಷದ ಜಿಲ್ಲಾಧ್ಯಕ್ಷ, ರೈತ ಮುಖಂಡ ಕೊಂಡಿಬಾರಾವ್ ಪಾಂಡ್ರೆ, ವಿಠಲರೆಡ್ಡಿ ಅಣದರೂ, ಶಾಂತಮ್ಮ ಮೂಲಗೆ, ವಿಜಯಕುಮಾರ ಬಾವಗಿ, ರುದ್ರುಸ್ವಾಮಿ ಬಸವಕಲ್ಯಾಣ, ಬಸವರಾಜ ಅಷ್ಟೂರ್, ಶಿವಕುಮಾರ ಖಂಡೆ, ಷಣ್ಮುಖಪ್ಪ ಅಣದೂರ, ವಿಠಲರಾವ್ ಮೇತ್ರೆ ಮತ್ತು ನಾಗಶೆಟ್ಟೆಪ್ಪ ಲಂಜವಾಡೆ ಸೇರಿದಂತೆ ಮತ್ತಿತರರು ಇದ್ದರು.