ಗದಗ ನಗರದ ದೇವರಾಜ ಅರಸು ಹಾಸ್ಟೆಲ್ ಕಚೇರಿಯಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಕುರಿತು ಶನಿವಾರ ಪೂರ್ವಭಾವಿ ಸಭೆ ನಡೆಯಿತು. ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಜೂ. 7ರಂದು ಚಾಲನೆ ನೀಡಲಾಗುತ್ತದೆ.

ಗದಗ: ನಗರದ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ 25ನೇ ವರ್ಷಾಚರಣೆಯ ಅಂಗವಾಗಿ 25 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವರ್ಷಪೂರ್ತಿಯ ಕಾರ್ಯಕ್ರಮಗಳಿಗೆ ಜೂ. 7ರಂದು ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ್ರ ಪಾಟೀಲ ಹೇಳಿದರು.

ನಗರದ ದೇವರಾಜ ಅರಸು ಹಾಸ್ಟೆಲ್ ಕಚೇರಿಯಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವ ಕುರಿತು ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಸಂಗೀತ, ಸಾಂಸ್ಕೃತಿಕ, ಕಲೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಸಾಧಕರನ್ನು ಗುರುತಿಸಿ ಗೌರವಿಸಬೇಕು. ಜಿಲ್ಲೆಯ ನಿರುದ್ಯೋಗ ಯುವಕ, ಯುವತಿಯರಿಗೆ ಕೌಶಲ್ಯಾಭಿವೃದ್ಧಿ ಕುರಿತು ವಿಶೇಷ ಕಾರ್ಯಕ್ರಮ ಮತ್ತು ಕೆರಿಯರ್ ಗೈಡೆನ್ಸ್ ಕುರಿತು ಕಾರ್ಯಕ್ರಮ ಆಯೋಜಿಸಿ, ಮಾರ್ಗದರ್ಶನ ನೀಡಿದರೆ ಜಿಲ್ಲೆಯ ನಿರುದ್ಯೋಗಿಗಳು ಸ್ವಾವಲಂಬಿಯಾಗಿ ಬದುಕುತ್ತಾರೆ ಮತ್ತು ಮಕ್ಕಳಿಗಾಗಿ ವಿಶೇಷ ಕ್ರೀಡೆಗಳು ಅಂದರೆ ಬಾಡ್ಮಿಂಟನ್ ಮತ್ತು ಸ್ಕೇಟಿಂಗ್‌ನಂತಹ ಕ್ರೀಡೆಗಳನ್ನು ಆಯೋಜಿಸಿದರೆ ಉತ್ತಮವಾಗುತ್ತದೆ ಎಂದು ಹೇಳಿದರು.

ಆರ್.ಡಿ. ಕಡ್ಲಿಕೊಪ್ಪ ಮಾತನಾಡಿ, ಪರಿಸರ ದಿನಾಚರಣೆ ಅಂಗವಾಗಿ ಈ ಪ್ರದೇಶದ ಮನೆಮನೆಗಳಿಗೆ ಸಸಿಗಳನ್ನು ನೀಡಿ ಅವುಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ಆರೋಗ್ಯಶಿಬಿರ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ದಿನಾಚರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಎಸ್.ಕೆ. ಮ್ಯಾಗೇರಿ, ಬಿ.ಬಿ. ಬಾವಿಕಟ್ಟಿ, ಯಲ್ಲಪ್ಪ ಗುರಿಕಾರ, ಶಶಿಧರ ರೊಳ್ಳಿ, ನಾಗಪ್ಪ ಗುಗ್ಗರಿ, ಆರ್.ಎಂ. ನಿಂಬನಾಯ್ಕರ, ಎಸ್.ಡಿ. ಸಿಂಗಟಾಲಕೇರಿ, ಎಸ್.ಎಸ್. ಮುದಿಯಜ್ಜನವರ, ಆರ್.ಎಸ್. ಕುರಿಯವರ, ಮೋಹನ ಇಮರಾಪುರ, ಹನುಮಂತಪ್ಪ ಗೊಜನೂರ, ಎಚ್.ಬಿ. ಪೋತಿ, ಬಿ.ಎಚ್. ಹ್ಯಾಟಿ, ಎಸ್.ಎಸ್. ಕರಡಿ, ಡಿ.ವೈ. ವಡಗೇರಿ, ಎ.ಬಿ. ಹುಗ್ಗೆಣ್ಣವರ, ವಿ.ಸಿ. ಚವಡಿಶೆಟ್ರ ಇದ್ದರು. ವೈ.ಬಿ. ಬಾನಾಪುರ ಸ್ವಾಗತಿಸಿದರು. ನೀಲಕಂಠ ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಬಿ. ಕಂಬಳಿ ವಂದಿಸಿದರು.