ಇಂದಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ವ್ಯಾಪಾರಕ್ಕೆ ನಿಂತಿವೆ. ಆದರೆ, ನಮ್ಮ ಶಿಕ್ಷಣ ಸಂಸ್ಥೆಗೆ ಮಕ್ಕಳ ಪಾಲಕರೇ ಆಧಾರಸ್ತಂಭಗಳಾಗಿದ್ದಾರೆ. ಅವರೆಲ್ಲರ ಆಶೀರ್ವಾದದಿಂದ ಈ ಸಂಸ್ಥೆಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಗದಗ: ನಗರದಲ್ಲಿ ಶಿಕ್ಷಣ ಕ್ರಾಂತಿಯೊಂದಿಗೆ ಸರ್ವಧರ್ಮಕ್ಕೂ ಶಿಕ್ಷಣ ನೀಡಿ ಇದೀಗ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾಳಿದಾಸ ಶಿಕ್ಷಣ ಸಮಿತಿಗೆ ಚಿರಋಣಿಯಾಗುವ ಮೂಲಕ ರಜತ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಮನವಿ ಮಾಡಿದರು.ನಗರದ ದೇವರಾಜ ಅರಸು ಹಾಸ್ಟೆಲ್ ಆವರಣದಲ್ಲಿ ಜರುಗಿದ ಕಾಳಿದಾಸ ಶಿಕ್ಷಣ ಸಮಿತಿಯ ರಜತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ಅನೇಕ ಸಂಸ್ಥೆಗಳು ವ್ಯಾಪಾರಕ್ಕೆ ನಿಂತಿವೆ. ಆದರೆ, ನಮ್ಮ ಶಿಕ್ಷಣ ಸಂಸ್ಥೆಗೆ ಮಕ್ಕಳ ಪಾಲಕರೇ ಆಧಾರಸ್ತಂಭಗಳಾಗಿದ್ದಾರೆ. ಅವರೆಲ್ಲರ ಆಶೀರ್ವಾದದಿಂದ ಈ ಸಂಸ್ಥೆಯು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರು.
ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ ಮಾತನಾಡಿ, ಜೀವನದಲ್ಲಿ 25ರ ಘಟ್ಟವು ಮಹತ್ವದ್ದಾಗಿದೆ. ಈ ಕುರಿತು ಪೂರ್ವಭಾವಿ ಸಭೆಯನ್ನು ಸಾರ್ವಜನಿಕರ ಉದ್ದೇಶಗಳನ್ನು ಪರಿಗಣಿಸುತ್ತಿರುವುದು ಸಂತೋಷಕರವಾಗಿದೆ ಎಂದರು.ಶಶಿಧರ ರೊಳ್ಳಿ ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ನ. 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಆಗಮಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ಅಗತ್ಯವಾಗಿದೆ ಎಂದರು.ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಯೋಗ ದಿನಾಚರಣೆ ಮತ್ತು ಸಾವಯವ ಕೃಷಿ ಕುರಿತ ಕಾರ್ಯಕ್ರಮಕ್ಕೆ ಪತಂಜಲಿ ಯೋಗ ಸಮಿತಿಯಿಂದ ಸಹಕಾರ ನೀಡುವುದಾಗಿ ಮತ್ತು ಕನೇರಿ ಶ್ರೀಗಳನ್ನು ಕರೆಸುವ ಪ್ರಯತ್ನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಡಾ. ಜಿ.ಬಿ. ಪಾಟೀಲ, ಡಾ. ಉಮೇಶ ಪುರದ, ಬಿಜೆಪಿಯ ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ, ಆರ್.ಡಿ. ಕಡ್ಲಿಕೊಪ್ಪ ಹಾಗೂ ನೀಲಕಂಠ ಮರುಡಿ ಮಾತನಾಡಿದರು. ಎಸ್.ಕೆ. ಮ್ಯಾಗೇರಿ, ಬಿ.ಬಿ. ಬಾವಿಕಟ್ಟಿ, ನಾಗಪ್ಪ ಗುಗ್ಗರಿ, ಶೇಖಣ್ಣ ಕಾಳೆ, ನಾಗರಾಜ ಮೆಣಸಗಿ, ಸೋಮನಗೌಡ ಪಾಟೀಲ, ಬಿ.ಎಸ್. ಮೇಟಿ, ಮುತ್ತು ಜಡಿ, ನಿಂಬನಾಯ್ಕರ, ದೊಡ್ಡಣ್ಣವರ, ಎಸ್.ಎಸ್. ಕರಡಿ, ಹ್ಯಾಟಿ, ವೈ.ಡಿ. ಜಡದೆಲೆ ಸೇರಿದಂತೆ ಮುಂತಾದವರು ಇದ್ದರು. ಕೆ.ಬಿ. ಕಂಬಳಿ ವಂದಿಸಿದರು.