ಸಾರಾಂಶ
ತರೀಕೆರೆಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ನೆಲೆಸಿ ಭಕ್ತಾಧಿಗಳನ್ನು ಸಲಹುತ್ತಾ ಬರುತ್ತಿರುವ ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ, ತರೀಕೆರೆ
ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ನೆಲೆಸಿ ಭಕ್ತಾಧಿಗಳನ್ನು ಸಲಹುತ್ತಾ ಬರುತ್ತಿರುವ ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಕ್ತರು ಶ್ರೀ ವೀರಭದ್ರೇಶ್ವರ ಸ್ವಾಮಿ ರಥಕ್ಕೆ ಕಾಳು ಮೆಣಸು ಇನ್ನಿತರೆ ದಿನಸಿ ಧಾನ್ಯಗಳನ್ನು ಎಸೆದರೆ ಅವರ ಹರೆಕೆ ತೀರಿದಂತಾಗಲಿದ್ದು, ಜೊತೆಗೆ ಈ ಭಾಗದ ರೈತರು ಮಹಾ ರಥಕ್ಕೆ ಎಸೆದ ಧಾನ್ಯಗಳನ್ನು ಸಂಗ್ರಹಿಸಿ ತಮ್ಮ ಗ್ರಾಮಗಳಿಗೆ ಕೊಂಡೊಯ್ದು ಮುಂಗಾರಿನ ಹಂಗಾಮಿನಲ್ಲಿ ಅವರವರ ಜಮೀನುಗಳಲ್ಲಿ ಭಿತ್ತನೇ ಮಾಡಿದ್ದೆ ಆದರೆ ಸಮೃದ್ಧ ವಾದ ಫಸಲು ಬರಲಿದೆ ಎಂಬ ಹಿನ್ನೆಲೆಯಲ್ಲಿ ಶ್ರೀ ಸ್ವಾಮಿಯ ರಥಕ್ಕೆ ಎಸೆಯುವ ದವಸ ಧಾನ್ಯಗಳನ್ನು ಭಕ್ತಾಧಿಗಳು ಸಂಗ್ರಹಿಸುತ್ತಾರೆ. ಶ್ರೀ ವೀರಭದ್ರೇಶ್ವರ ಸ್ವಾಮಿಯವರ ರಥೋತ್ಸವದ ಸಂದರ್ಭದಲ್ಲಿ ಕಲ್ಲತ್ತಿಗಿರಿಯ ಕ್ಷೇತ್ರ ದೇವತೆಯಾದ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ, ಕೃಷ್ಣಾಪುರ ಗ್ರಾಮದ ಕೆಪ್ಪ ಚೌಡೇಶ್ವರಿ ದೇವಿ , ಮತ್ತು ಗಂಗೂರಿನ ಗ್ರಾಮ ದೇವತೆ ಗಂಗೂರಮ್ಮ ದೇವಿ ಸೇರಿದಂತೆ ವಿವಿಧ ದೇವತೆಗಳು ಸಾತ್ ನೀಡಿದ್ದು ಜಾತ್ರೆಗೆ ವಿಶೇಷ ಕಳೆ ಬಂದಂತಾಗಿತ್ತು.ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಗರುಡ ಪಕ್ಷಿಯೊಂದು ಆಕಾಶದಲ್ಲಿ ಹಾರಾಡುತ್ತಾ ರಥದ ಸುತ್ತಲು ಪ್ರದಕ್ಷಿಣೆ ಹಾಕಿದ್ದನ್ನು ಕಂಡ ಭಕ್ತಾಧಿಗಳು ಭಕ್ತಿ ಪರವಶರಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಲಿಂಗದಹಳ್ಳಿ ಕೃಷ್ಣಾಪುರ, ಗಂಗೂರು, ನಂದಿಬಟ್ಟಲು, ಕಲ್ಲತ್ತಿಪುರ, ಸೇರಿದಂತೆ ರಾಜ್ಯದ ವಿವಿಧೆಡೆ ಗಳಿಂದ ಆಗಮಿಸಿದ ನೂರಾರು ಭಕ್ತರು ಶ್ರೀ ದೇವರ ಬ್ರಹ್ಮ ರಥಕ್ಕೆ ಕಾಳು ಮೆಣಸು, ಬಾಳೆಹಣ್ಣು, ದವನ ಮುಂತಾದ ಮಂಗಳ ದ್ರವ್ಯಗಳು ಮತ್ತು ದಾನ್ಯಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ಭಕ್ತಿಯನ್ನು ಶ್ರೀ ಸ್ವಾಮಿಗೆ ಸಮರ್ಪಣೆ ಮಾಡಿದರು.11ಕೆಟಿಆರ್.ಕೆ.4ಃ
ಕಲ್ಲತ್ತಿಗಿರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ಶ್ರೀ ಕ್ಷೇತ್ರ ಕಲ್ಲತ್ತಿಗಿರಿಯಲ್ಲಿ ವಿಜೃಂಭಣೆಯಿಂದ ನಡೆಯಿತು.