ನೀಟ್‌ನಲ್ಲಿ ಕಲ್ಯಾಣ್‌, ಶ್ಯಾಮ್‌, ಅರ್ಜುನ್ ರಾಜ್ಯಕ್ಕೆ ಟಾಪರ್ಸ್‌

| Published : Jun 05 2024, 01:30 AM IST / Updated: Jun 05 2024, 09:04 AM IST

NEET UG 2024 Answer Key
ನೀಟ್‌ನಲ್ಲಿ ಕಲ್ಯಾಣ್‌, ಶ್ಯಾಮ್‌, ಅರ್ಜುನ್ ರಾಜ್ಯಕ್ಕೆ ಟಾಪರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

2024ನೇ ಸಾಲಿನ ನೀಟ್‌ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ ಕರ್ನಾಟಕದ 1.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 89,088 ಮಂದಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

 ಬೆಂಗಳೂರು :  ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸಿದ 2024ನೇ ಸಾಲಿನ ನೀಟ್‌ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ ಕರ್ನಾಟಕದ 1.50 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 89,088 ಮಂದಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ರಾಜ್ಯದ ವಿವಿಧ ಕಾಲೇಜುಗಳ ವಿ.ಕಲ್ಯಾಣ್, ಶ್ಯಾಮ್ ಶ್ರೇಯಸ್ ಜೋಸೆಫ್, ಅರ್ಜುನ್ ಕಿಶೋರ್ ರಾಜ್ಯದ ಟಾಪರ್‌ಗಳಾಗಿ ಸಾಧನೆ ಮಾಡಿದ್ದಾರೆ. ಅಲ್ಲದೆ, ಅಖಿಲ ಭಾರತ ಮಟ್ಟದ ಟಾಪ್‌ 1000 ಸ್ಥಾನಗಳಲ್ಲಿ ಈ ಮೂವರು ವಿದ್ಯಾರ್ಥಿಗಳ ಜೊತೆಗೆ ಪದ್ಮನಾಭ್ ಮೆನನ್, ಪ್ರಜ್ಞಾ ಪಿ.ಶೆಟ್ಟಿ, ಖುಷಿ ಮಗನೂರ್ ಎಂಬ ರಾಜ್ಯದ ವಿದ್ಯಾರ್ಥಿಗಳೂ ಕೂಡ ಸ್ಥಾನ ಪಡೆದಿದ್ದಾರೆ. ಎಲ್ಲರೂ ಶೇ.99.98 ಅಂಕಗಳನ್ನು ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಸ್ಥಾನ ಪಡೆದಿದ್ದಾರೆ.

ತಮ್ಮ ನೀಟ್‌ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿ.ಕಲ್ಯಾಣ್‌, ನನ್ನದು ಮೂಲತಃ ಕೋಲಾರ ಜಿಲ್ಲೆ. ನನಗೆ ಸಿಇಟಿಯಲ್ಲಿ 4 ವಿಭಾಗದಲ್ಲಿ ಮೊದಲ ರ್‍ಯಾಂಕ್‌ ಬಂದಿತ್ತು. ವೈದ್ಯಕೀಯ ಕೋರ್ಸು ಪ್ರವೇಶ ಪಡೆಯುವುದು ನನ್ನ ಮೊದಲ ಆದ್ಯತೆಯಾಗಿತ್ತು. ಹಾಗಾಗಿ ನೀಟ್‌ ಕೂಡ ಬರೆದಿದ್ದೆ. ಅಂತಿಮವಾಗಿ ನನ್ನ ಶ್ರಮ ಸಾರ್ಥಕವಾಗಿದೆ. ಕಾಲೇಜಿನಲ್ಲಿಯೇ ಇಂಟಿಗ್ರೇಟೆಡ್‌ ಇದ್ದಿದ್ದರಿಂದ ಬೇರೆಲ್ಲೂ ತರಬೇತಿಗೆ ಪ್ರಯತ್ನಿಸಲಿಲ್ಲ. 2 ವರ್ಷಗಳ ಸತತ ಪ್ರಯತ್ನದಿಂದ ಇಷ್ಟು ಉತ್ತಮ ರ್‍ಯಾಂಕ್ ಪಡೆಯಲು ಸಾಧ್ಯವಾಗಿದೆ. ನನ್ನ ಪೋಷಕರು ಮತ್ತು ಕಾಲೇಜಿನಲ್ಲಿನ ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಸಾಧನೆ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಟಾಪರ್‌ ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿ ಶ್ಯಾಮ್‌ ಶ್ರೇಯಸ್‌ ಜೋಸೆಫ್‌, ನನ್ನ ತಂದೆಯಂತೆ ನಾನೂ ವೈದ್ಯನಾಗಬೇಕೆಂಬ ಅಭಿಲಾಷೆ ಚಿಕ್ಕಂದಿನಿಂದಲೇ ಬೆಳೆದು ಬಂದಿತ್ತು. ಉತ್ತಮ ಪರಿಶ್ರಮದಿಂದ ನೀಟ್‌ನಲ್ಲಿ ಒಳ್ಳೆಯ ರ್‍ಯಾಂಕ್‌ ಬಂದಿದ್ದು ನನ್ನ ಆಸೆ ಈಡೇರಿಸಲು ದಾರಿಯಾಗಿದೆ. ದೆಹಲಿಯ ಏಮ್ಸ್‌ನಲ್ಲಿ ಪ್ರವೇಶ ಬಯಸಿದ್ದೇನೆ. ಬೆಳಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೂ ಕಾಲೇಜಿನಲ್ಲೇ ನಾನು ವ್ಯಾಸಂಗ ಮಾಡುತ್ತಿದ್ದೆ. ಶಿಕ್ಷಕರ ಉತ್ತಮ ತರಬೇತಿ, ಮಾರ್ಗದರ್ಶನ, ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ. ಓದಿನ ಮಧ್ಯೆ ಪಿಯಾನೋ ನುಡಿಸುವುದು, ಪುಟ್‌ಬಾಲ್ ಆಡುವುದು ನನ್ನ ಹವ್ಯಾಸ ಎಂದು ತಿಳಿಸಿದರು.