ಸಾರಾಂಶ
೧೯೯೮ರಿಂದಲೂ ಸಿಎಂ ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಒಂದೇ ಜಿಲ್ಲೆಯಲ್ಲಿ ಸಿಎಂ ಧ್ವಜಾರೋಹಣ ಮಾಡದೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಒಂದೊಂದು ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಬೇಕು. ಇದರ ಭಾಗವಾಗಿ ಈ ವರ್ಷ ಕೊಪ್ಪಳದಲ್ಲಿ ನೆರವೇರಿಸಬೇಕು.
ಕೊಪ್ಪಳ:
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಹಾಗೂ ಈ ಭಾಗದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಿಲ್ಲೆಗಳು ಹೋರಾಟ ಮಾಡಿವೆ. ಹೀಗಾಗಿ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣವನ್ನು ಸಿಎಂ ಸಿದ್ದರಾಮಯ್ಯ ಪ್ರತಿ ಬಾರಿ ಕಲಬುರಗಿಯಲ್ಲಿ ನೆರವೇರಿಸುವ ಬದಲು ಈ ವರ್ಷ ಕೊಪ್ಪಳ, ಮುಂದಿನ ವರ್ಷದಿಂದ ಒಂದೊಂದು ಜಿಲ್ಲೆಯಲ್ಲಿ ನೆರವೇರಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಜಿಲ್ಲಾ ಸಮಿತಿ ಆಗ್ರಹಿಸಿದೆ.ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಶುಕ್ರವಾರ ಮನವಿ ಸಲ್ಲಿಸಿದ ಸಮಿತಿ, ದೇಶಕ್ಕೆ ಸ್ವಾತಂತ್ರ್ಯ ೧೯೪೭ರ ಆ. ೧೫ರಂದು ಸಿಕ್ಕರೆ ಹೈದರಾಬಾದ್ ಸಂಸ್ಥಾನವು ಸೆ. ೧೭, ೧೯೪೮ರಂದು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಈ ದಿನವನ್ನು ೧೯೯೮ರಿಂದ ಪ್ರತಿ ವರ್ಷ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿತ್ತು, ಕಳೆದ ಅವಧಿಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವವೆಂದು ಘೋಷಿಸಿದೆ. ೧೯೯೮ರಿಂದಲೂ ಸಿಎಂ ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಒಂದೇ ಜಿಲ್ಲೆಯಲ್ಲಿ ಸಿಎಂ ಧ್ವಜಾರೋಹಣ ಮಾಡದೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಒಂದೊಂದು ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಬೇಕು. ಇದರ ಭಾಗವಾಗಿ ಈ ವರ್ಷ ಕೊಪ್ಪಳದಲ್ಲಿ ನೆರವೇರಿಸಬೇಕೆಂದರು.
ಈ ವೇಳೆ ಅಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಸಂಚಾಲಕ ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ, ಹುಲಗಪ್ಪ ಕಟ್ಟಿಮನಿ, ಸೋಮನಗೌಡ ಹೊಗರನಾಳ, ಸುಧಾಕರ ಮುಜಗೊಂಡ, ನಿತೇಶ ಪುಲಸ್ಕರ, ವಿನೋದ ಡೊಳ್ಳಿನ, ಆರ್. ಮಂಜುನಾಥ ಇದ್ದರು.