ಕಾಮದಹನ, ಹೋಳಿ ಸಂಭ್ರಮದಲ್ಲಿ ಕಾನೂನು ಮೀರದಿರಿ

| Published : Mar 24 2024, 01:37 AM IST

ಸಾರಾಂಶ

ಜಿಲ್ಲಾದ್ಯಂತ ಮಾ.24ರಂದು ಕಾಮದಹನ, 25ರಂದು ಹೋಳಿಹಬ್ಬ ಆಚರಣೆ ಹಿನ್ನೆಲೆ ಸಾರ್ವಜನಿಕರು ನೆಮ್ಮದಿಗೆ ಭಂಗವಾಗದಂತೆ ಹಬ್ಬ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನೀಡಲಾಗಿರುವ ಸೂಚನೆಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಿ, ಸಹಕರಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ದಾವಣಗೆರೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲಾದ್ಯಂತ ಮಾ.24ರಂದು ಕಾಮದಹನ, 25ರಂದು ಹೋಳಿಹಬ್ಬ ಆಚರಣೆ ಹಿನ್ನೆಲೆ ಸಾರ್ವಜನಿಕರು ನೆಮ್ಮದಿಗೆ ಭಂಗವಾಗದಂತೆ ಹಬ್ಬ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನೀಡಲಾಗಿರುವ ಸೂಚನೆಗಳನ್ನು ಸಾರ್ವಜನಿಕರು ತಪ್ಪದೇ ಪಾಲಿಸಿ, ಸಹಕರಿಸಬೇಕು ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಯಾರ ಮೇಲೂ ಒತ್ತಾಯದಿಂದ ಬಣ್ಣ ಎರಚುವಂತಿಲ್ಲ. ಪಿಯುಸಿ ಹಾಗೂ ಇತರೆ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಬಣ್ಣ ಎರಚಬಾರದು, ಕಿಡಿಗೇಡಿತನಕ್ಕೆ ಮುಂದಾದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ಪೇಂಟ್, ವಾರ್ನಿಷ್, ಆಸಿಡ್, ಡಾಂಬರ್, ಗಾಣದ ಎಣ್ಣೆ, ಮೊಟ್ಟೆ ಹಾಗೂ ಯಾವುದೇ ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಮೈಮೇಲೆ ಎರಚುವಂತಿಲ್ಲ. ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ನೌಕರರು ಹಾಗೂ ಶಾಲಾ ವಿದ್ಯಾರ್ಥಿಗಳ ಮೇಲೆ ಬಣ್ಣ ಎರಚಿದಲ್ಲಿ ಕಾನೂನು ಕ್ರಮ ನಿಶ್ಚಿತ. ಸಾರ್ವಜನಿಕ ನೀರು ಸರಬರಾಜು ಸ್ಥಳಗಳಲ್ಲಿ ಬಣ್ಣ ತೊಳೆದು ನೀರನ್ನು ಮಲೀನ ಮಾಡಬಾರದು. ಹೋಳಿ ಸಂಭ್ರಮ ನೆಪದಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷವಾಗಿ ಮೆಡಿಕಲ್ ಮತ್ತು ಎಂಜಿನಿಯರ್ ವಿದ್ಯಾರ್ಥಿಗಳು ಒಂದು ವಿದ್ಯಾರ್ಥಿ ನಿಲಯದಿಂದ ಇನ್ನೊಂದು ವಿದ್ಯಾರ್ಥಿ ನಿಲಯಕ್ಕೆ ಹೋಗಿ ಬಣ್ಣ ಎರಚುವುದಾಗಲಿ ಅಥವಾ ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ತೆರಳಿ ಅವರಿಗೆ ಬಣ್ಣ ಎರಚುವುದು ಸಹ ನಿಷೇಧಿಸಿದೆ. ಧ್ವನಿವರ್ಧಕ ಅಳವಡಿಕೆ ನಿಯಮವನ್ನು ಮತ್ತು ಅನುಮತಿಯನ್ನು ಸಂಬಂಧಪಟ್ಟ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಣ್ಣ ಎರಚುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವವರು, ಚುಡಾಯಿಸುವವರು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಮದ್ಯ ಸೇವನೆ ಮಾಡಿ ಅತಿವೇಗದ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವವರ ಮೇಲೆ ಇಲಾಖೆ ಹದ್ದಿನಕಟ್ಟಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಧಾರ್ಮಿಕ ಕಟ್ಟಡಗಳಾದ ಚರ್ಚು, ಮಸೀದಿ, ದರ್ಗಾ ಮತ್ತು ದೇವಾಲಯಗಳಿಗೆ ಬಣ್ಣ ಎರಚವಂತಿಲ್ಲ. ದ್ವಿಚಕ್ರ ವಾಹನಗಳಲ್ಲಿ 3 ಜನರು ಸೇರಿ ಸವಾರಿಯಾಗಲಿ, ವಾಹನದ ಸೈಲೆನ್ಸರ್‌ಗಳನ್ನು ತೆಗೆದು ಕರ್ಕಶ ಶಬ್ದಗಳ ಸೈಲೆನ್ಸರ್‌ಗಳ ಉಪಯೋಗವಾಗಲಿ ಕಂಡುಬಂದಲ್ಲಿ ಅಂತಹ ವಾಹನಗಳನ್ನು ಸ್ವಾಧೀನಕ್ಕೆ ಪಡೆದು, ಕ್ರಮ ಕೈಗೊಳ್ಳಲಾಗುವುದು. ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳಿಗೆ ನಂಬರ್ ಕಾಣದಂತೆ ಬಟ್ಟೆ ಕಟ್ಟುವುದು ಹಾಗೂ ಬಣ್ಣ, ಗ್ರೀಸ್ ಹಚ್ಚಿಕೊಂಡು ಸಂಚರಿಸುವುದು ಅಪರಾಧ ಎಂದು ತಿಳಿಸಿದ್ದಾರೆ.

ಕಾಮದಹನವನ್ನು ಹಾಗೂ ಹೋಳಿ ಹಬ್ಬವನ್ನು ನಿಗದಿತ ಸಮಯದೊಳಗೇ ಮುಕ್ತಾಯಗೊಳಿಸಬೇಕು. ಹೋಳಿ ಸಂಬಂಧ ಹಾಗೂ ಕಾನೂನು ಸುವ್ಯವಸ್ಥೆ ಗೆ ಧಕ್ಕೆ ಬರುವಂತಹ ಪ್ರಚೋದನಾಕಾರಿ ಪೋಸ್ಟರ್‌ಗಳನ್ನು ಹಾಕುವುದಾಗಲೀ, ಸುಳ್ಳುಸುದ್ದಿ-ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುವುದಾಗಲಿ ಹಾಗೂ ಯಾವುದೇ ಧರ್ಮದ ವಿರುದ್ಧ/ ವ್ಯಕ್ತಿಯ ವಿರುದ್ಧ ಅವಹೇಳನಕಾರಿ ಪೋಸ್ಟರ್ /ಸಂದೇಶಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು/ ರವಾನಿಸುವುದು ನಿಷಿದ್ಧ. ಅಲ್ಲದೇ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ಯಾವುದೇ ಜಾತ್ರೆ, ಹಬ್ಬ, ಮೆರವಣಿಗೆ, ಕಾರ್ಯಕ್ರಮ ನಡೆಸುವ ಬಗ್ಗೆ ಹಾಗೂ ಫ್ಲೆಕ್ಸ್-ಬ್ಯಾನರ್‌ಗಳನ್ನು ಹಾಕುವುದಕ್ಕೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸೂಚಿಸಿದ್ದಾರೆ.

- - - -22ಕೆಡಿವಿಜಿ49ಃ: ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ