ವಿಶೇಷ ವರದಿ

ಮಂಗಳೂರು: ಕ್ಯಾಂಟಿನ್, ಕೆಫೆ ಎಂದರೆ ಅಲ್ಲಿ ಸದ್ದು-ಗದ್ದಲ, ವ್ಯವಹಾರದ ಜಂಜಾಟಗಳ ನಡುವೆ ಮಂಗಳೂರಿನ ‘ಕಾಮಧೇನು’ ಕೆಫೆ ಸಾಮಾಜಿಕ ಸಂದೇಶ ಸಾರುತ್ತಾ, ಕಲಾತ್ಮಕ ಸೊಗಡಿನ ತಾಣವಾಗಿ ಕೆಫೆಪ್ರಿಯರನ್ನು ಆಕರ್ಷಿಸುತ್ತಿದೆ.ಮಂಗಳೂರಿನ ಜೈಲ್‌ ರಸ್ತೆಯ ಪಿಯೋ ಮಾಲ್‌ನಲ್ಲಿರುವ ಉರ್ವ ಸಚಿನ್‌ ಕರ್ಕೇರ ಅವರ ‘ಕಾಮಧೇನು’ ಕೆಫೆ ಪ್ರವೇಶಿಸಿದರೆ ಸಾಕು, ಮನಸ್ಸನ್ನು ಮುದಗೊಳಿಸುವ ಸಾಮಾಜಿಕ ಸಂದೇಶಗಳು ಸ್ವಾಗತಿಸುತ್ತವೆ. ಹಳೆಯ ಕಾಲದ ಚಹಾ ಮಗ್‌ಗಳನ್ನು ಕಲಾತ್ಮಕತೆಯ ರೂಪದಲ್ಲಿ ಇಲ್ಲಿ ಹೆಣೆಯಲಾಗಿದೆ. ಸಚಿನ್‌ ಕರ್ಕೆರ ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಿರುವ ಈ ಕೆಫೆಯ ಮೂಲಕ ಸಾಮಾಜಿಕ ಸಂದೇಶ, ನೆರವು, ಮಾನವೀಯತೆಯ ಜೊತೆಗೆ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ವಿದೇಶದಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಸಚಿನ್‌ ಊರಿಗೆ ಬಂದು ಮಂಗಳೂರು ಸಮೀಪ ಜಿಮ್‌ ಆರಂಭಿಸಿದ್ದರು. ಜಿಮ್‌ ಉದ್ಯಮದಲ್ಲಿ ಆದಾಯ ಗಳಿಕೆ ಆರಂಭವಾದ ಹೊತ್ತಲ್ಲಿ ಜಗತ್ತಿಗೆ ಆಗಮಿಸಿದ ಕೊರೋನಾದಿಂದ ಉದ್ಯಮಕ್ಕೆ ಹೊಡೆತ ಬಿದ್ದು, ಅನಿವಾರ್ಯವಾಗಿ ಜಿಮ್‌ ಬಂದ್‌ ಮಾಡಬೇಕಾಯಿತು. ಬಳಿಕ ಸಚಿನ್‌ ಅವರು ಆರಂಭಿಸಿದ ‘ಕಾಮಧೇನು’ ಕೆಫೆ ಇಂದು ಅವರ ಕೈಹಿಡಿದಿದೆ.ಸಾಮಾಜಿಕ ಸಂದೇಶ: ಸಚಿನ್‌ ಅವರ ಕೆಫೆ ಕೇವಲ ಕ್ಯಾಂಟಿನ್‌ ಕೆಫೆ ಆಗಿರದೇ, ಅದೊಂದು ಕಲಾತ್ಮಕ ತಾಣ. ಯಾವುದೇ ಹೆಚ್ಚಿನ ಸದ್ದು-ಗದ್ದಲ ಇಲ್ಲದ ಸ್ಥಳ. ಕೆಫೆಯ ಗೋಡೆಯಲ್ಲಿ ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಾಮಾಜಿಕ ಸಂದೇಶ ಬರಹಗಳು ಕಾಫಿ ಪ್ರಿಯರ ಗಮನ ಸೆಳೆಯುತ್ತವೆ. ರಾಷ್ಟ್ರ ನಾಯಕರ ಭಾವಚಿತ್ರದ ಜೊತೆಗೆ ಸರ್ವ-ಧರ್ಮ ಸಂದೇಶಗಳನ್ನು ಸಾರುವ ಚಿತ್ರಣಗಳಿವೆ. ಪ್ರೇರಣದಾಯಕ ವಾಕ್ಯಗಳನ್ನು, ಸಂದೇಶಗಳು ಗೋಡೆಗಳಲ್ಲಿ ರಾರಾಜಿಸುತ್ತಿವೆ.

ಕೆಫೆಯ ಪೂರ್ತಿ ಆಕರ್ಷಕ ಕಲಾತ್ಮಕ ಚಿತ್ರಣಗಳು, ಪ್ರದರ್ಶನ, ಕಲಾಕೃತಿಗಳಿವೆ. ಮಗ್‌ನಲ್ಲಿ ಕಾಫಿಯನ್ನು ಗ್ಲಾಸ್‌ಗೆ ಹಾಕುವುದು, ಬೆಳದಿಂಗಳಂತೆ ಉರಿಯುವ ದೀಪದ ಬೆಳಕಿನ ವಿದ್ಯುತ್‌ ದೀಪಾಲಂಕಾರಗಳ ಕಲಾಕೃತಿಗಳ ಅಲ್ಲಲ್ಲಿ ಅಳವಡಿಕೆ ಮಾಡಲಾಗಿದ್ದು, ಕೆಫೆಯ ಸೊಗಡನ್ನು ಹೆಚ್ಚಿಸಿವೆ.

ಸ್ವಚ್ಛತೆಗೆ ಇಲ್ಲಿ ಮಹತ್ವ ನೀಡಲಾಗುತ್ತಿದ್ದು, ಚಹಾ-ಕಾಫಿ ಸಹಿತ ಆರೋಗ್ಯಕರ ತಿನಿಸು ನೀಡುತ್ತಾರೆ. ಸಚಿನ್ ಅವರ ಸ್ವ ಉದ್ಯೋಗದ ಸ್ವಾವಲಂಬಿ ಬದುಕು, ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳನ್ನು ಅವರನ್ನು ಸನ್ಮಾನಿಸಿ, ಗೌರವಿಸಿವೆ.


ಹಸಿವು ನೀಗಿಸುವ ಉಚಿತ ಕಾರ್ಯ:

ಸಚಿನ್‌ ಅವರು ತಮ್ಮ ಕೆಫೆಯನ್ನು ವ್ಯವಹಾರಕ್ಕಾಗಿ ಮಾತ್ರ ನಿರ್ವಹಿಸದೆ ಸಮಾಜಮುಖಿಯಾಗಿಯೂ ನಿರ್ವಹಿಸಿದ್ದರು. ಟೀ, ಕಾಫಿ, ಉಪಹಾರ ಸೇವಿಸಲು ಹಣವಿಲ್ಲದವರಿಗೆ ಕೂಪನ್‌ ವ್ಯವಸ್ಥೆ ಮಾಡಿದ್ದರು. ಕೆಫೆಯ ಬೋರ್ಡ್‌ನಲ್ಲಿ ಹಲವು ಕೂಪನ್‌ಗಳನ್ನು ಅಂಟಿಸಲಾಗಿತ್ತು. ಕೆಫೆಯಲ್ಲಿ ಉಪಹಾರ ಸೇವಿಸಿದ ಗ್ರಾಹಕರು ತಮ್ಮ ಹೆಸರಿನಲ್ಲಿ ಈ ದಿನ ಬಡವರಿಗೆ ಒಂದು ಹೊತ್ತಿನ ಉಪಹಾರ ನೀಡುವುದಕ್ಕಾಗಿ ಹಣ ನೀಡಿ ಹೋಗುತ್ತಾರೆ. ಅವರು ನೀಡಿದ ಹೆಚ್ಚುವರಿ ಹಣಕ್ಕೆ ಬದಲಾಗಿ ಕೂಪನ್‌ಗಳನ್ನು ಮಾಡಿ ಅದನ್ನು ವಾಲ್‌ ಬೋರ್ಡ್‌ಗೆ ಅಂಟಿಸುತ್ತಿದ್ದರು. ಹಣವಿಲ್ಲದವರಿಗೆ ಈ ಕೂಪನ್‌ನ ಹಣದಿಂದ ಸಚಿನ್‌ ಅವರು ಉಪಹಾರ ನೀಡುತ್ತಿದ್ದರು. ಸೆಕ್ಯೂರಿಟಿ ಗಾರ್ಡ್‌ಗಳು, ಪೌರಕಾರ್ಮಿಕರು, ಅಲೆಮಾರಿಗಳು ಸೇರಿದಂತೆ ಅವಶ್ಯಕತೆ ಇರುವವರು ಇದರ ಪ್ರಯೋಜನ ಪಡೆದು ಉಚಿತ ಉಪಹಾರ ಸೇವಿಸುತ್ತಿದ್ದರು. ಸಚಿನ್‌ರ ಈ ಕಾರ್ಯಗಳಿಗೆ ಅವರ ಸ್ನೇಹಿತರು ಕೈಜೋಡಿಸಿದ್ದರು. ಈಗಲೂ ಸಚಿನ್‌ ಅವರು, ಅಸಕ್ತರಿಗೆ, ಹಣವಿಲ್ಲದೇ ಬರುವವರಿಗೆ ಯಾವುದೇ ಪ್ರಚಾರವಿಲ್ಲದೇ ಉಚಿತ ಉಪಹಾರ ನೀಡುವ ಕಾರ್ಯ ಮುಂದುವರಿಸಿದ್ದಾರೆ.

‘ಕಾಮಧೇನು’ ಕೆಫೆ ರೂಪುಗೊಂಡ ಬಗೆ

ಕರೊನಾ ಪರಿಣಾಮ ಬದುಕಿನಲ್ಲಿ ನಷ್ಟ ಅನುಭವಿಸಿದ ಸಚಿನ್‌ ಅವರು ಅಂದು ಈಶ ಫೌಂಡೇಶನ್‌ಗೆ ತೆರಳಿದ್ದ ಸಂದರ್ಭ ಅಲ್ಲೋರ್ವ ಚಹಾದ ಅಂಗಡಿ ಇಟ್ಟು ಒಂದು ಗಂಟೆಯಲ್ಲಿ ಸಾವಿರಾರು ರುಪಾಯಿ ವ್ಯವಹಾರ ನಡೆಸುತ್ತಿರುವುದನ್ನು ಕಂಡು, ನಾನು ಯಾಕೆ ಇಂತಹ ಸ್ವಾವಲಂಬಿ ಉದ್ಯಮ ನಡೆಸಬಾರದು ಎಂಬ ಯೋಚನೆಯಂತೆ ಕೆಫೆ ಆರಂಭಿಸಿದರು. ಅಂದು ಸಚಿನ್‌ ಅವರು ತನ್ನ ‘ಕಾಮಧೇನು’ ಕೆಫೆಯನ್ನು ಮಂಗಳೂರಿನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಬಾಯಿ-ಕುಶ ದಂಪತಿಯಿಂದ ಉದ್ಘಾಟಿಸಿ, ಅವರನ್ನು ಸನ್ಮಾನಿಸಿದರು. ಎರಡುವರೆ ವರ್ಷದಲ್ಲಿ ಅವರು ಹಿಂದೆ ಮಾಡಿದ್ದ 8 ಲಕ್ಷ ರು. ಸಾಲವನ್ನು ಕೂಡ ತಮ್ಮ ಸ್ವ ಉದ್ಯೋಗದಿಂದಲೇ ಮರುಪಾವತಿಸಿದ್ದಾರೆ.

ಸಚಿನ್‌ ಅವರು ‘ಕಾಮಧೇನು’ ಕೆಫೆಯಲ್ಲಿ ಮಾಲೀಕರು ಹಾಗೂ ಕೆಲಸಗಾರ ಓರ್ವರೇ ಆಗಿದ್ದಾರೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 2.30ರಿಂದ ರಾತ್ರಿ 8.30ರ ವರೆಗೆ ಕೆಫೆ ತೆರೆದಿರುತ್ತದೆ. ಭಾನುವಾರ ಕೆಫೆಗೆ ರಜೆ. ಆ ದಿನ ಸಚಿನ್‌ ಅವರು ಏಕಾಂಗಿಯಾಗಿ ಸಾರ್ವಜನಿಕರ ಪ್ರದೇಶಗಳಾದ ಬೀಚ್‌ ಹಾಗೂ ಇತರೆಡೆ ಸ್ವಚ್ಛತಾ ಕಾರ್ಯಗಳನ್ನು ನಡೆಸುತ್ತಾರೆ.

ಜಿಮ್‌ ನಡೆಸುತ್ತಿದ್ದ ವೇಳೆ ಜಗತ್ತಿಗೆ ಆವರಿಸಿದ ಕೊರೋನದಿಂದ ಲಾಕ್‌ಡೌನ್‌ ಪರಿಣಾಮ ಜಿಮ್‌ ನಡೆಸಲಾಗದೇ ಲಕ್ಷಾಂತರ ರು. ನಷ್ಟ ಅನುಭವಿಸಿದೆ, ಸಾಲದಲ್ಲಿ ಸಿಲುಕಿದೆ. ಬಳಿಕ ನಾನು ಕೆಫೆ ಆರಂಭಿಸಿ ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಾಗಿದೆ. ನನ್ನ ಕೆಫೆಯಲ್ಲಿ ಎಲ್ಲ ಕೆಲಸಗಳನ್ನು, ಸರ್ವೀಸ್‌ಗಳನ್ನು ನಾನೇ ಮಾಡಿಕೊಂಡು ಕೆಫೆ ನಡೆಸಿಕೊಂಡಿದ್ದೇನೆ.

- ಸಚಿನ್‌ ಕರ್ಕೇರ, ‘ಕಾಮಧೇನು’ ಕೆಫೆ ಮಾಲೀಕರು