ಸಾರಾಂಶ
ನಾಡೋಜ ಡಾ.ಕಮಲಾ ಹಂಪನಾ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಸುರಪುರ
ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ. ಕಥೆ, ಕಾದಂಬರಿ, ವಿಮರ್ಶೆ, ವೈಚಾರಿಕ ಸಾಹಿತ್ಯ, ಶಿಶು ಸಾಹಿತ್ಯ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿದ್ದ ಅವರು ಕನ್ನಡದ ಮೇರು ಸಾಹಿತಿಯಾಗಿದ್ದರು ಎಂದು ಕಲಬುರಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಜೆ.ಅಗಸ್ಟಿನ್ ಹೇಳಿದರು.ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಡಾ.ಕಮಲಾ ಹಂಪನಾರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡೋಜ ಡಾ.ಕಮಲಾ ಹಂಪನಾ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಕೊಡುಗೆ ಬಹಳ ಮಹತ್ವವಾದದ್ದು ಎಂದರು.
ಶಿಕ್ಷಕ ಕನಕಪ್ಪ ವಾಗಣಗೇರಿ ಮಾತನಾಡಿ, ಹಳೆಗನ್ನಡ ಸಾಹಿತ್ಯದ ಮೇರು ಕೃತಿಯಾದ ಪರಮದೇವ ಕವಿಯ ತುರಂಗ ಭಾರತದ ಕೃತಿ ಸಂಪಾದಿಸಿ ಕನ್ನಡ ಸಾರಸತ್ವ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಎಂದರು.ಶಿಕ್ಷಕ ಮಹಾಂತೇಶ ಗೋನಾಲ ಮಾತನಾಡಿ, ಡಾ.ಕಮಲಾ ಹಂಪನಾ ಕನ್ನಡ ಲೇಖಕಿಯರ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದರು.
ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಅಪಾರವಾದ ತಮ್ಮ ಜ್ಞಾನದ ಪರಿದಿಯಲ್ಲಿ ಕನ್ನಡದ ಅತ್ಯಮೂಲ್ಯ ಕೃತಿಗಳನ್ನು ಸಂಪಾದಿಸಿ ಹಳೆಗನ್ನಡ ಕ್ಷೇತ್ರದ ಬೆಳವಣಿಗೆಗೆ ಅವರು ಮಹತ್ವವಾದ ಕೊಡುಗೆ ನೀಡಿದ್ದಾರೆ ಎಂದರು.ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ, ವೆಂಕಟೇಶಗೌಡ ಪಾಟೀಲ್, ಸಿದ್ದಯ್ಯಸ್ವಾಮಿ ಮಠ, ದೇವು ಹೆಬ್ಬಾಳ ಮಾತನಾಡಿದರು. ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.
ಪ್ರಕಾಶಚಂದ ಜೈನ್, ರಾಘವೇಂದ್ರ ಬಾಡಿಯಾಳ, ನಬಿಲಾಲ ಮಕಾನದಾರ, ನರಸಿಂಹ ಬಾಡಿಯಾಳ, ಶ್ರೀಪಾದ ಗಡ್ಡದ, ರಾಘವೇಂದ್ರ ಬಕ್ರಿ, ಪ್ರಕಾಶ್ ಬಣಗಾರ ಇತರರಿದ್ದರು. ಎಚ್. ರಾಠೋಡ ವಂದಿಸಿದರು.