ಮೈಸೂರು ದಸರಾ ಕ್ರೀಡೆಯಲ್ಲಿ ಕಂಬಳ ಕೂಟ ಆಯೋಜನೆ: ಡಿಸಿಎಂ ಡಿಕೆಶಿ

| Published : Apr 13 2025, 02:10 AM IST

ಸಾರಾಂಶ

ಗುರುಪುರ ಮಾಣಿಬೆಟ್ಟು ಗುತ್ತುವಿನಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ‘ಗುರುಪುರ ಕಂಬಳ’ದ ಸಭಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ವರ್ಷದಿಂದಲೇ ವಿಶ್ವ ಪ್ರಸಿದ್ಧ ಮೈಸೂರು ದಸರಾ ಕ್ರೀಡೆಯಲ್ಲಿ ಕಂಬಳ ಕೂಟವನ್ನು ಆಯೋಜಿಸಲಾಗುವುದು. ಮೈಸೂರು ದಸರಾಕ್ಕೆ ಸಂಬಂಧಿಸಿದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು. ಈ ಮೂಲಕ ದಸರಾಗೆ ಹೊಸ ರೂಪ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಶನಿವಾರ ಗುರುಪುರ ಮಾಣಿಬೆಟ್ಟು ಗುತ್ತುವಿನಲ್ಲಿ ದ್ವಿತೀಯ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ‘ಗುರುಪುರ ಕಂಬಳ’ದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದಸರಾದಲ್ಲಿ ಪ್ರತಿ ವರ್ಷ ಕಂಬಳ ಕೂಟ ಆಯೋಜಿಸುವ ಮೂಲಕ ಕಂಬಳ ಪರಂಪರೆಯನ್ನು ಉಳಿಸುವ ಕೆಲಸ ಸರ್ಕಾರದಿಂದಲೇ ನಡೆಯಲಿದೆ. ಕನಿಷ್ಠ ಮೂರು ಎಕರೆ ಜಾಗದಲ್ಲಿ ಕಂಬಳ ಕೂಟ ನಡೆಸಲು ಸಾಧ್ಯವಿದೆ. ಜಿಲ್ಲಾ ಕಂಬಳ ಸಮಿತಿಯನ್ನು ಈ ನಿಟ್ಟಿನಲ್ಲಿ ಜೋಡಿಸಿಕೊಂಡು ಕಂಬಳ ಆಯೋಜಿಸಲು ಅಗತ್ಯವಿರುವ ಜಾಗವನ್ನು ಅಂತಿಮ ಪಡಿಸಲಾಗುವುದು. ಈಗಾಗಲೇ ಬೆಂಗಳೂರು ಕಂಬಳ ಹೊಸ ಇತಿಹಾಸ ಬರೆದಿದ್ದು, ಮುಂದಿನ ದಿನಗಳಲ್ಲಿ ಮೈಸೂರು ಕಂಬಳ ಕೂಡಾ ಇದೇ ರೀತಿ ಪ್ರಸಿದ್ಧಿ ಪಡೆಯಲಿದೆ ಎಂದರು.ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ: ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಸರು ಪಡೆದಿರುವ ಕರಾವಳಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಪ್ರವಾಸೋದ್ಯಮ ಸಚಿವರನ್ನು ಜಿಲ್ಲೆಗೆ ಕರೆಸಿ ಸಭೆ ನಡೆಸಿ ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದರು.ಕರಾವಳಿಯ ಶಕ್ತಿ: ಕರಾವಳಿಗೆ ಇಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಇತಿಹಾಸವೇ ಶಕ್ತಿ. ಯಾವ ಜಿಲ್ಲೆಯಲ್ಲೂ ಕರಾವಳಿಯಷ್ಟು ಶ್ರೀಮಂತ ಇತಿಹಾಸ ಇರಲು ಸಾಧ್ಯವಿಲ್ಲ. ರಾಷ್ಟ್ರಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಶಕ್ತಿ ನೀಡಿದ ಪ್ರದೇಶವೂ ಹೌದು. ಇದನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಗುರುಪುರ ಕಂಬಳ ಸಮಿತಿ ವತಿಯಿಂದ ಡಿ.ಕೆ. ಶಿವಕುಮಾರ್‌ ಅವರಿಗೆ ಚಿನ್ನದ ನೊಗ ಮತ್ತು ಬೆಳ್ಳಿಯ ಪಟ್ಟಿಯ ಕಂಬಳದ ಕೋಲು ನೀಡಿ ಗೌರವಿಸಲಾಯಿತು.ಸಾಧಕರಿಗೆ ಸಮ್ಮಾನ: ಕಂಬಳ, ಧಾರ್ಮಿಕ ಕ್ಷೇತ್ರದ ಸಾಧಕರಾದ ಗುಣಪಾಲ ಕಡಂಬ, ಎರ್ಮಾಳ್‌ ರೋಹಿತ್‌ ಹೆಗ್ಡೆ, ಮುಂಚೂರು ಲೋಕೇಶ್‌ ಶೆಟ್ಟಿ, ಪದ್ಮನಾಭ ಕೋಟ್ಯಾನ್‌, ಪದ್ಮನಾಭ ಶೆಟ್ಟಿದೋಣಿಂಜೆ ಗುತ್ತು ಇವರನ್ನು ಸಮ್ಮಾನಿಸಲಾಯಿತು.ಕಂಬಳ ಸಮಿತಿ ಅಧ್ಯಕ್ಷ ಇನಾಯತ್‌ ಅಲಿ ಮಾತನಾಡಿ, ಕಂಬಳ ತುಳುನಾಡಿನ ಹಬ್ಬ. ಹಿಂದೆ ಗುರುಪುರ ಆಸುಪಾಸಿನಲ್ಲಿ ನಡೆಯುತ್ತಿದ್ದ ಕಂಬಳವನ್ನು ಮತ್ತೆ ಆರಂಭಿಸಬೇಕು ಎಂದು ಸಮಿತಿ ರಚಿಸಿ ಕಳೆದ ವರ್ಷ ಚಾಲನೆ ನೀಡಲಾಯಿತು. ಈ ಬಾರಿ ಎರಡನೇ ವರ್ಷ ಅದ್ದೂರಿಯಾಗಿ ಕಂಬಳೋತ್ಸವ ಆಚರಿಸಲಾಗಿದೆ ಎಂದರು.ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌, ಪ್ರಮುಖರಾದ ಮಿಥುನ್‌ ರೈ, ಪದ್ಮರಾಜ್‌ ಆರ್‌. ಪೂಜಾರಿ, ರಕ್ಷಿತ್‌ ಶಿವರಾಮ್‌, ಕಣಚೂರು ಮೋನು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ಬೆಳಪು ದೇವಿ ಪ್ರಸಾದ್‌ ಶೆಟ್ಟಿ, ಗುರುಪುರ ಕಂಬಳ ಸಮಿತಿ ಸ್ಥಾಪಕಾಧ್ಯಕ್ಷ ರಾಜ್‌ ಕುಮಾರ್‌ ಶೆಟ್ಟಿ ತಿರುವೈಲು ಗುತ್ತು, ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ಮಾಣಿಬೆಟ್ಟು ಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ಕುಮಾರ್‌ ಶೆಟ್ಟಿ ಮತ್ತಿತರರಿದ್ದರು.

ಚೇತನ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.----------------ಕಂಬಳ ಕೋಣ ದೂಜನಿಗೆ ಗೌರವಕಂಬಳ ಕ್ಷೇತ್ರದಲ್ಲಿ ಹೆಸರು ಮಾಡಿದ ಓಟದ ಕೋಟ ಪದವು ಕಾನಡ್ಕದ ದೂಜನಿಗೆ ಡಿ.ಕೆ.ಶಿವಕುಮಾರ್‌ ಅವರು ಗೌರವಾರ್ಪಣೆ ಮಾಡಿದರು. ಬಳಿಕ ದೂಜನ ಚಿತ್ರವುಳ್ಳ ಪೋಸ್ಟ್‌ ಕಾರ್ಡ್‌ ಬಿಡುಗಡೆಗೊಳಿಸಿದರು.