ಮಹಾಲಿಂಗಪುರ ಪಟ್ಟಣದಿಂದ ಭಾರತದ ೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಭಾವಿ ಜ್ಯೋತಿರ್ಲಿಂಗ ಇರುವ ಸುಕ್ಷೇತ್ರ ಶ್ರೀಶೈಲಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಂಬಿ ಮಲ್ಲಯ್ಯ ಮಂಗಳವಾರ ಬೆಳಗ್ಗೆ ಪ್ರಯಾಣ ಬೆಳೆಸಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶ್ರೀ ಗುರು ಮಹಾಲಿಂಗೇಶ್ವರರ ಪಾದ ಸ್ಪರ್ಮಶದಿಂದ ಮಹಾಲಿಂಗಪುರ ಸರ್ವ ಧರ್ಮಗಳ ನಡುವೆ ಭ್ರಾತೃತ್ವ ಹೊಂದಿದ ಪಟ್ಟಣವಾಗಿದೆ. ರಾಜ್ಯದಲ್ಲಿಯೇ ಭಾವ್ಯಕ್ಯತೆಯ ನಗರವೆಂದು ಪ್ರಸಿದ್ಧಿಯಾಗಿದೆ. ಮನುಕುಲಕ್ಕೆ ಇಂತಹ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾಲಿಂಗೇಶ್ವರರು ನೆಲೆಸಿದ ನಾಡಿನಲ್ಲಿ ವಾಸಿಸುವವರು ಭಾಗ್ಯವಂತರು. ಮಹಾಲಿಂಗೇಶ್ವರರಲ್ಲಿ ಶುದ್ಧ ನಿರ್ಮಲ ಭಕ್ತಿ ತೋರಿದರೆ ಎಲ್ಲ ರೀತಿಯ ಮನೋಭಿಲಾಷೆಗಳು ನೆರವೇರುತ್ತವೆ. ಕಂಬಿ ಹೊತ್ತು ನಂಬಿ ಹೋಗುವವರಿಗೆ ಮಲ್ಲಯ್ಯ ಒಲಿಯುತ್ತಾನೆ ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದಿಂದ ಭಾರತದ ೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಭಾವಿ ಜ್ಯೋತಿರ್ಲಿಂಗ ಇರುವ ಸುಕ್ಷೇತ್ರ ಶ್ರೀಶೈಲಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಂಬಿ ಮಲ್ಲಯ್ಯ ಮಂಗಳವಾರ ಮುಂಜಾನೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಿತಗೊಂಡ ಮಲ್ಲಯ್ಯನ ಜೊತೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರನ್ನಬೆಳಗಲಿ ರಸ್ತೆಯಲ್ಲಿರುವ ಅಗಸಿ ಬಾಗಿಲವರೆಗೆ ಸಕಲ ಭಕ್ತವೃಂದ ಹಾಗೂ ವಾದ್ಯಮೇಳಗಳೊಂದಿಗೆ ಕಾಲ್ನಡಿಗೆಯಲ್ಲಿ ಆಗಮಿಸಿದರು. ಬೀಳ್ಕೊಡುವ ಮಾರ್ಗದುದ್ದಕ್ಕೂ ಸಾಲಾಗಿ ನಿಂತ ಮುತ್ತೈದೆಯರು ಕೊಡದಿಂದ ನೀರು ಸುರಿದು ಆಶೀರ್ವಾದ ಪಡೆದರು. ಅಗಸಿ ಬಾಗಿಲ ಹತ್ತಿರ ಮಲ್ಲಯ್ಯನಿಗೆ ಮಂಗಳಾರತಿ ಮಾಡಲಾಯಿತು. ಶ್ರೀಮಠದ ಹೋರಿ ಮಹಾಲಿಂಗ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಇದು ಸತತ ೧೧ ವರ್ಷಗಳಿಂದ ಸದ್ಭಕ್ತರ ಜೊತೆ ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಿದೆ.ನೆರೆದಿದ್ದ ಸಾವಿರಾರು ಜನ ಭಕ್ತರ ನಡುವೆ ಮಲ್ಲಯ್ಯ ಪ್ರಯಾಣ ಬೆಳೆಸಿದ. ಮಾರ್ಗ ಮಧ್ಯೆ ಯಾತ್ರಿಕರಿಗೆ ಅನೇಕರು ತಿಂಡಿ, ಚಹಾ, ಬಿಸ್ಕಿಟ್, ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮಹಾಲಿಂಗಪುರ ಔಷಧ ವ್ಯಾಪಾರಸ್ಥರ ಸಂಘದಿಂದ ಪ್ರಥಮ ಚಿಕಿತ್ಸೆಗಾಗಿ ಉಚಿತ ಔಷಧ ವಿತರಿಸಲಾಯಿತು. ಸಿದ್ದಯ್ಯ ಸ್ವಾಮಿ,ಶ್ರೀಶೈಲ ಸ್ವಾಮಿ,ವಿಶ್ವನಾಥ ಮಠ,ಈಶ್ವರ ಮಠದ ಸೇರಿದಂತೆ ಅನೇಕ ಭಕ್ತರಿದ್ದರು.