ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ದೇವಸ್ಥಾನ ಭಕ್ತಿ ಶ್ರದ್ಧೆಯ ಕೇಂದ್ರವಾಗಿ ಮಾತ್ರ ಉಳಿಯದೆ ಸಮಾಜಮುಖಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡಿದೆ. ಇಂತಹ ಸಮಾಜಮುಖಿ ಕಾರ್ಯಗಳ ರೂಪವಾಗಿ ರಘುರಾಮ ಸಭಾಭವನದ ಉದ್ಘಾಟನೆ ನಡೆದಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.ಭಾನುವಾರ ಕಂಬಿಬಾಣೆಯಲ್ಲಿರುವ ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ದೇವಸ್ಥಾನದ 11ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡು ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ರಘು ರಾಮ ಸಭಾ ಭವನದ ಉದ್ಘಾಟನೆ ನೇರವೇರಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಂ.ಪಿ.ಅಪ್ಪಚ್ಚು ರಂಜನ್ ಅವರೊಂದಿಗೆ ಸಭಾ ಭವನದ ದಾನಿಗಳಾದ ಮ್ಯಾಗಡೂರು ತೋಟದ ಮಾಲೀಕರಾದ ಟಿ.ಕೆ.ಸಜೀವ ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರರಾದ ಟಿ.ಕೆ.ಸಾಯಿಕುಮಾರ್ ಮತ್ತು ಟಿ.ಕೆ.ರಾಜೀವ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಟಿ.ಕೆ.ಸಾಯಿಕುಮಾರ್ ತಮ್ಮಕ ತಂದೆ ಕುಮಾರನ್ ಅವರ ನೆನಪಿನಲ್ಲಿ ನಮ್ಮ ಹಿರಿಯ ಸಹೋದರ ಟಿ.ಕೆ.ಸಜೀವ ಅವರು ಜನೋಪಯೋಗಿ ದೃಷ್ಟಿಯಿಂದ ರಘುರಾಮ ಸಭಾ ಭವನವನ್ನು 7 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ದೇವಳ ಅಭಿವೃದ್ಧಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ.ಶಶಿಕಾಂತ ರೈ ಮತ್ತು ಅವರ ತಂಡ ಅಭಿನಂದನೆಗೆ ಆರ್ಹರಾಗಿದ್ದು, ಪ್ರತಿಯೊಬ್ಬರಿಂದ ಅಳಿಲು ಸೇವೆ ಅಪೇಕ್ಷಿಸಿ ಈ ಭವ್ಯವಾದ ಸಭಾ ಭವನವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಗೀತಾ ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದರು.ಕಂಬಿಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಎಲ್‌ಕೆಜಿ ಮತ್ತು ಯುಕೆಜಿ ವಿಭಾಗವನ್ನು ತೆರಯಲಾಗಿದ್ದು ಸ್ಥಳೀಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಟಿ.ಕೆ.ರಾಜೀವ್ ಮಾತನಾಡಿ ಈ ದೇವಸ್ಥಾನದ ಆವರಣದಲ್ಲಿ ತಮ್ಮ ಒಂದನೇ ಮತ್ತು 2 ತರಗತಿ ವಿದ್ಯಾಭ್ಯಾಸ ಮಾಡಿದ್ದನ್ನು ನೆನಪಿಸಿಕೊಂಡು ಇಂದು ದೇವಾಲಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹೆಮ್ಮರವಾಗಿ ಬೆಳೆದಿದ್ದನ್ನು ಪ್ರಂಶಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಾಮ ಮತ್ತು ಶ್ರೀಚಾಮುಂಡೇಶ್ವರಿ ಸಮಿತಿಯ ಅಧ್ಯಕ್ಷ ಡಾ.ಶಶಿಕಾಂತ ರೈ ವಹಿಸಿ ದೇವಾಲಯದ ಹಂತ ಹಂತ ಪ್ರಗತಿ ಚಿತ್ರಣವನ್ನು ನೀಡಿದರು. ಶಾಳಾ ವಿದ್ಯಾರ್ಥಿ ದರ್ಶನ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಕೀರ್ತನ ಅವರ ಭರತನಾಟ್ಯ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಪೂರ್ಣಿಮ ಪ್ರಭಾಕರ್, ದೀಪಾ ಶಶಿಕಾಂತರೈ ನಿರೂಪಿಸಿ, ವಂದಿಸಿದರು.
ಉದ್ಘಾಟನೆಗೂ ಮೊದಲು ಕ್ಷೇತ್ರದ ತಂತತ್ರಿಗಳಾದ ಬ್ರಹ್ಮಶ್ರೀ ವೇದ ಮೂರ್ತಿ ಭಾಸ್ಕರ ಕಲ್ಲುರಾಯ ಕ್ಷೇತ್ರದ ಆರ್ಚಕರಾದ ಪ್ರಭಾಕರ ಕುಂದಣ್ಣಯ್ಯ ನೇತೃತ್ವದಲ್ಲಿ ನಡೆಯಿತು. ದಿನದ ಅಂಗವಾಗಿ ಗಣಪತಿಹೋಮ, ದುರ್ಗಾ ಹೋಮ, ರಾಮತಾರಕ ಹೋಮ, ಕಲಶಪೂಜೆ, ಶ್ರೀರಾಮ ಮತ್ತು ಚಾಮುಂಡೇಶ್ವರಿ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಪಂಚವಿಂಶತಿ ಕಲಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಸಹಭೋಜನ ನಡೆಯಿತು.