ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆ

| Published : Aug 19 2025, 01:00 AM IST

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಕಂಪ್ಲಿ -ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆಯಾಗಿದೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಕಂಪ್ಲಿ -ಗಂಗಾವತಿ ಸಂಪರ್ಕ ಸೇತುವೆಗೆ ಮತ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ತುಂಗಾ, ಭದ್ರಾ, ವರದಾ ನದಿಗಳು ಉಕ್ಕಿ ಹರಿಯುತ್ತಿದ್ದೂ ತುಂಗಭದ್ರಾ ನದಿಗೆ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ತುಂಗಭದ್ರಾ ಜಲಾಶಯದ ಕೆಲ ಗೇಟ್‌ಗಳು ಬೆಂಡಾದ ಕಾರಣ ಜಲಾಶಯದಲ್ಲಿ 80 ಟಿಎಂಸಿಯಷ್ಟು ನೀರನ್ನು ಮಾತ್ರ ಶೇಖರಿಸಿಡಲು ತೀರ್ಮಾನಿಸಿದೆ. ಆದ್ದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಬಂದ ನೀರನ್ನೆಲ್ಲ ನದಿಗೆ ಹರಿಬಿಡಲಾಗುತ್ತಿದೆ. ಸೋಮವಾರ ಜಲಾಶಯದಿಂದ 1 ಲಕ್ಷ ಕ್ಯುಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಮತ್ತೆ ಮುಳುಗಡೆಯಾಗಿದೆ. ಅಲ್ಲದೇ ಕೋಟೆ ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗುವ ಆತಂಕ ಉಂಟಾಗಿದೆ. ನದಿ ಪಾತ್ರದ ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡು ಬೆಳೆ ನಷ್ಟ ಉಂಟಾಗುವ ಆತಂಕದಲ್ಲಿ ರೈತರಿದ್ದಾರೆ.

ಸಂಚಾರ ನಿರ್ಬಂಧ:

ಸೇತುವೆ ಮೇಲಿನ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಭಾನುವಾರ ಗಂಗಾವತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ. ಸೇತುವೆ ಇನ್ನು ಮುಳುಗಡೆಗೊಳ್ಳದ ಕಾರಣ ಆದೇಶದ ನಡುವೆಯೂ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋಮವಾರ ಮಧ್ಯಾಹ್ನದ ವರೆಗೂ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುವು ಕಲ್ಪಿಸಲಾಗಿತ್ತು. ಮಧ್ಯಾಹ್ನ ನಂತರ ದ್ವಿಚಕ್ರ ವಾಹನಗಳ ಸಂಚಾರ ಹಾಗೂ ಪಾದಚಾರಿಗಳಿಗೆ ಮಾತ್ರ ಅನುವು ನೀಡಲಾಗಿತ್ತು. ಸಂಜೆ ದ್ವಿಚಕ್ರ ವಾಹನ ಸಂಚಾರಕ್ಕೂ ನಿರ್ಬಂಧ ಹೇರಿ ಪಾದಚಾರಿಗಳಿಗೆ ಮಾತ್ರ ಅನುವು ಕಲ್ಪಿಸಲಾಯಿತು.

ತಹಸೀಲ್ದಾರ್ ಭೇಟಿ ಪರಿಶೀಲನೆ:

ಕಂಪ್ಲಿ -ಗಂಗಾವತಿ ಸಂಪರ್ಕ ಸೇತುವೆ ಬಳಿ ತಹಸೀಲ್ದಾರ್ ಜೂಗಲ ಮಂಜು ನಾಯಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿ ಜಲಾಶಯದಿಂದ ನದಿಗೆ ಹರಿಬಿಡುವ ನೀರಿನ ಪ್ರಮಾಣದಲ್ಲಿ ಹೆಚ್ಚಾದ ಕಾರಣ ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ನದಿಯ ಬಳಿ ತೆರಳಬಾರದೆಂದು ಸ್ಥಳೀಯರಿಗೆ ಸೂಚಿಸಲಾಗಿದೆ. ಇನ್ನು ಗಂಜಿ ಕೇಂದ್ರ ತೆರೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.