ಜ.5ರಂದು ಕನಕ ಜಯಂತಿ, ಸಿಎಂ ಚಾಲನೆ: ರಾಮಪ್ಪ

| Published : Dec 14 2024, 12:46 AM IST

ಸಾರಾಂಶ

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಕುರುಬರ ಸಂಘದಿಂದ ಜ.5ರಂದು ಜಿಲ್ಲಾಮಟ್ಟದ ದಾಸಶ್ರೇಷ್ಠ ಶ್ರೀ ಕನಕದಾಸ 537ನೇ ಜಯಂತಿ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭಕ್ಕೆ ಚಾಲನೆ ನೀಡುವರು ಎಂದು ಹರಿಹರ ಮಾಜಿ ಶಾಸಕ, ಸಮಾಜದ ಹಿರಿಯ ಮುಖಂಡ ಎಸ್.ರಾಮಪ್ಪ ಹೇಳಿದ್ದಾರೆ.

- 50 ಸಾವಿರ ಜನ ಸೇರುವ ನಿರೀಕ್ಷೆ । ಮಠಾಧೀಶರು, ರಾಜಕೀಯ ಗಣ್ಯರು ಉಪಸ್ಥಿತಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಕುರುಬರ ಸಂಘದಿಂದ ಜ.5ರಂದು ಜಿಲ್ಲಾಮಟ್ಟದ ದಾಸಶ್ರೇಷ್ಠ ಶ್ರೀ ಕನಕದಾಸ 537ನೇ ಜಯಂತಿ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭಕ್ಕೆ ಚಾಲನೆ ನೀಡುವರು ಎಂದು ಹರಿಹರ ಮಾಜಿ ಶಾಸಕ, ಸಮಾಜದ ಹಿರಿಯ ಮುಖಂಡ ಎಸ್.ರಾಮಪ್ಪ ಹೇಳಿದರು.

ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಭೈರತಿ ಸುರೇಶ, ಸತೀಶ ಜಾರಕಿಹೊಳಿ, ಜಮೀರ್ ಅಹಮ್ಮದ್, ಡಾ. ಎಚ್.ಸಿ. ಮಹದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಪಾಲ್ಗೊಳ್ಳುವರು ಎಂದರು.

ಕಾಗಿನೆಲೆ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದ ಸಾನಿಧ್ಯ ವಹಿಸುವರು. ಸುಮಾರು 45-50 ಸಾವಿರ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಕ್ಷಾತೀತವಾಗಿ ಕನಕ ಜಯಂತಿ ಆಚರಿಸುತ್ತಿದ್ದೇವೆ. ನಾಡು ಕಂಡ ಮಹಾನ್ ಸಂತರು, ಚಿಂತಕರು, ತತ್ವಜ್ಞಾನಿ, ಬದಲಾವಣೆಯ ಹರಿಕಾರರಾದ ಶ್ರೀ ಕನಕ ದಾಸರ ಜಯಂತಿಯಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜ.4ರಂದು ಬೈಕ್‌ ರ್ಯಾಲಿ:

ಜಯಂತ್ಯುತ್ಸವ ಪೂರ್ವಭಾವಿಯಾಗಿ ಜ.4ರಂದು ಬೆಳಗ್ಗೆ 9.30ಕ್ಕೆ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ ರಸ್ತೆ ಶ್ರೀ ಬೀರೇಶ್ವರ ಬಡಾವಣೆಯ ಶ್ರೀ ಕಾಳಿದಾಸ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಜ.5ರಂದು ಬೆಳಗ್ಗೆ 9.30 ಗಂಟೆಗೆ ಶಿವಾಜಿ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನವರೆಗೆ ಮೆರವಣಿಗೆ ನಡೆಯಲಿದೆ. ಅದೇ ದಿನ ಬೆಳಗ್ಗೆ 11 ಗಂಟೆಗೆ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಮಲ್ಲಿಕಾರ್ಜುನ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಇಟ್ಟಿಗುಡಿ ಮಂಜುನಾಥ, ಸದಸ್ಯ ಜೆ.ಎನ್.ಶ್ರೀನಿವಾಸ, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ಬಿ.ಎಚ್. ಪರಶುರಾಮಪ್ಪ, ಶಿವಣ್ಣ, ಓಮಣ್ಣ, ಹಾಲೇಶಪ್ಪ, ಸಮಾಜದ ಮುಖಂಡರು ಇದ್ದರು.

- - - -13ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ ಕನಕ ಜಯಂತಿ ಕಾರ್ಯಕ್ರಮ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.