ದಾಸ ಸಾಹಿತ್ಯಕ್ಕೆ ಕನಕರ ಕೊಡುಗೆ ಅಪಾರ

| Published : Nov 19 2024, 12:46 AM IST

ಸಾರಾಂಶ

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಕನಕರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಇಂದಿಗೂ ಪ್ರಸ್ತುತವಾಗಿವೆ.

ಕನ್ನಡಪ್ರಭ ಗೌರಿಬಿದನೂರು

ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ನೋಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕೆಂದು ಶಾಸಕ ಕೆ.ಹೆಚ್. ಪುಟ್ಟಸ್ವಾಮಿಗೌಡ ತಿಳಿಸಿದರು.ನಗರದ ಹೊರವಲಯದಲ್ಲಿರುವ ತಾಲ್ಲೂಕು ಆಡಳಿತ ಕಛೇರಿಯಲ್ಲಿ ಆಯೋಜಿಸಿದ್ದ ಕನಕದಾಸರ ಜಯೋತೋತ್ಸವದಲ್ಲಿ ಶಾಸಕರು ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ದಾಸ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ

ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ತತ್ವಜ್ಞಾನಿ ಶ್ರೀ ಕನಕದಾಸರು. ಜಾತಿ, ಮತ ಮತ್ತು ಸಮಾಜಿಕ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತ, ಸಮಾಜ ಹಾಗೂ ದಾಸಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಕನಕದಾಸರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಕನಕರು ರಚಿಸಿದ ಕೃತಿಗಳು ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಲ್ಲದೆ ಪ್ರಸ್ತುತ ದಿನಗಳಲ್ಲಿಯೂ ಸಹ ಸಮಾಜದ ಸಾಮಾಜಿಕ ಜಾಗೃತಿಗೆ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು. ಸಾಧಕರಿಗೆ ಸನ್ಮಾನ:

ಈ ಸಂದರ್ಭದಲ್ಕಿ ಸಮುದಾಯದಲ್ಲಿ ನಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ತಹಸೀಲ್ದಾರ್ ಮಹೇಶ್. ಎಸ್.ಪತ್ರಿ, ತಾಪಂ ಇಒ ಜೆ.ಕೆ.ಹೊನ್ನಯ್ಯ, ಆಯುಕ್ತರು ಡಿ.ಎಂ.ಗೀತಾ, ನಗರಸಭೆ ಅಧ್ಯಕ್ಷರು ಲಕ್ಷ್ಮಿನಾರಾಯಣಪ್ಪ, ಕುರುಬ ಸಂಘದ ಕಾರ್ಯದರ್ಶಿ ಲಕ್ಕಪ್ಪ, ಖಜಾಂಚಿ-ಮೈಲಾರಪ್ಪ, ಕಸಾಪ ಅಧ್ಯಕ್ಷ ಜನಾರ್ದನಮೂರ್ತಿ ಮತ್ತಿತರರು ಭಾಗವಹಿಸಿದ್ದರು.

.