ಸಾರಾಂಶ
ಕಾರ್ಯಕ್ರಮದ ಕೊನೆಯಲ್ಲಿ ಕನಕದಾಸರ ಭಕ್ತಿ ಗೀತೆಗಳು ಗಾಯನ ತಂಡದಿಂದ ನಾದಿಸಲ್ಪಟ್ಟವು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಬಡವ- ಶ್ರೀಮಂತರ ನಡುವಿನ ಭೇದವನ್ನು ನೀಗಿಸಿ ಸಮಾನತೆಯ ಸಂದೇಶ ಸಾರಿರುವ ಕನಕದಾಸರು ಒಂದು ಸಮುದಾಯದವರಲ್ಲ, ಅವರು ಇಡೀ ಮಾನವಕುಲಕ್ಕೆ ಮಾದರಿಯಾದ ಶ್ರೇಷ್ಠ ಚಿಂತಕ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.ನಗರದ ಹಾಸನಾಂಬೆ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ‘ದಾಸಶ್ರೇಷ್ಠ ಕನಕದಾಸರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಜಾತಿ- ಜಾತಿಗಳ ನಡುವಿನ ಅಡೆತಡೆಗಳನ್ನು ಕರಗಿಸಿದವರು. ಅವರ ರಾಮಧ್ಯಾನ ಚರಿತೆಯಂತಹ ಕೃತಿಗಳು ಬಡವ- ಶ್ರೀಮಂತರ ಮಧ್ಯದ ಭೇದವನ್ನು ನೀಗಿಸಿ ಸಮಾನತೆಯ ಸಂದೇಶ ನೀಡಿವೆ ಎಂದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಮಾತನಾಡಿ, ದಾಸಶ್ರೇಷ್ಠ ಶ್ರೀ ಕನಕದಾಸರ ಬರಹಗಳು ಕನ್ನಡ ಸಾಹಿತ್ಯದ ಆಭರಣವಾಗಿದ್ದು, ಅವರ ಮಾನವತಾವಾದಿ ಚಿಂತನೆಗಳು ಇಂದಿಗೂ ಸಮಾಜಕ್ಕೆ ಪ್ರೇರಣೆ ನೀಡುತ್ತಿವೆ. ಇಂತಹ ಮಹಾನ್ ಭಾವಕವಿ ನಮ್ಮ ರಾಜ್ಯದಲ್ಲಿ ಜನಿಸಿದ್ದು ನಮ್ಮೆಲ್ಲರ ಹೆಮ್ಮೆ. ಕನಕದಾಸರು ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿದರು. ಅವರ ಕೀರ್ತನೆಗಳು ಕೇವಲ ಭಕ್ತಿಗೀತೆಗಳಲ್ಲ, ಮನುಷ್ಯನ ಬದುಕಿಗೆ ಬೆಳಕು ತೋರಿಸುವ ತತ್ತ್ವೋಪದೇಶಗಳಾಗಿವೆ. ಅವರ ಜೀವನಮೌಲ್ಯಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಹೇಳಿದರು. ಕಾಗಿನೆಲೆಯ ಆದಿಕೇಶವನ ದೇವಾಲಯದಲ್ಲಿ ಇಂದಿಗೂ ಕನಕದಾಸರು ಉಪಯೋಗಿಸಿದ ವಸ್ತುಗಳು ಸಂಗ್ರಹವಾಗಿದ್ದು, ಅವರ ಅಜರಾಮರ ಸ್ಮರಣೆಯನ್ನು ಜೀವಂತವಾಗಿಟ್ಟಿವೆ. ೧೬ನೇ ಶತಮಾನದಲ್ಲೇ ತಮ್ಮ ಲೌಕಿಕ ಜೀವನವನ್ನು ಬದಿಗಿಟ್ಟು ಕೀರ್ತನೆಗಳ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಅವರ ಜೀವನ ಶೈಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಕಾರ್ಯಕ್ರಮದ ಕೊನೆಯಲ್ಲಿ ಕನಕದಾಸರ ಭಕ್ತಿ ಗೀತೆಗಳು ಗಾಯನ ತಂಡದಿಂದ ನಾದಿಸಲ್ಪಟ್ಟವು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಮಹಾನಗರ ಪಾಲಿಕೆಯ ಮೇಯರ್ ಗಿರೀಶ್ ಚನ್ನವೀರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ತಹಸೀಲ್ದಾರ್ ಗೀತಾ ಹಾಗೂ ಸಮುದಾಯದ ಮುಖಂಡರಾದ ಸಿದ್ದೇಗೌಡ, ನವಿಲೇ ಅಣ್ಣಪ್ಪ, ಮಲ್ಲಿಗೆವಾಳು ದೇವಪ್ಪ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))