ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕನಕದಾಸರ ಕೀರ್ತನೆ, ಅವರ ದಾಸ ಸಾಹಿತ್ಯವನ್ನು ಅರ್ಥೈಸಿ ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಸಾಧ್ಯವಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಅವರು ಗುರಿವಾರ ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ, ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಹಾಲುಮತ ಮಹಾಸಭಾ ಸಹಯೋಗದಲ್ಲಿ ನಡೆದ ಕನಕದಾಸ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತವಾದ ಸಂತ ಅಲ್ಲ. ಅವರು ನಮ್ಮೆಲ್ಲರ ಗುರು. ಕನಕದಾಸರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ, ಕಾಗಿನೆಲೆಯಿಂದ ಉಡುಪಿಗೆ ಕೃಷ್ಣನನ್ನು ಹುಡುಕಿ ಬಂದ ಕನಕದಾಸರ ಭಕ್ತಿಯ ಪರಾಕಾಷ್ಠೆಗೆ ಶ್ರೀಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ ದರ್ಶನ ನೀಡಿದ ಪ್ರತೀತಿ ಇದೆ ಎಂದರು.ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿ, ಈ ಬಾರಿಯ ಅಧಿವೇಶನದಲ್ಲಿ ಉಡುಪಿಯಲ್ಲಿ ಕನಕ ಭವನವನ್ನು ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡುವುದಾಗಿ ಭರವಸೆ ನೀಡಿದರು. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಸುಮಾ ಎಸ್. ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕನಕದಾಸ ಸಮಾಜ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಡೊಳ್ಳಿನ, ಹಾಲುಮತ ಮಹಾ ಸಭಾ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಚ್. ಐಹೊಳೆ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿ, ವಂದಿಸಿದರು.