ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕನಕದಾಸರು ಅನುಗಾಲ ಸ್ಮರಿಸಬೇಕಾದ ವ್ಯಕ್ತಿತ್ವದ ಮೇರು ಪರ್ವತವಾಗಿದ್ದಾರೆ ಎಂದು ಮಹಾಜನ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರ ಭಕ್ತಿ ಹಾಗೂ ಆಧ್ಯಾತ್ಮಿಕ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಕೇವಲ ಕೀರ್ತನಕಾರರು ಮಾತ್ರವಾಗಿರದೇ, ಕವಿಯಾಗಿ, ವಿದ್ವಾಂಸರಾಗಿ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂದರು.
ಇಂದಿನ ಧಾರವಾಡ ಜಿಲ್ಲೆಯ ಬಂಕಾಪುರದ ಬಾಡಗ್ರಾಮದಲ್ಲಿ ಜನಿಸಿದ ಮೂಲ ಹೆಸರಿನ ತಿಮ್ಮಪ್ಪನಾಯಕ ನಂತರದ ಇತಿಹಾಸದಲ್ಲಿ ಸಂತ ಕನಕದಾಸರೆಂದೇ ಪ್ರಸಿದ್ಧರಾದರು. ವ್ಯಾಸರಾಯರ ಶಿಷ್ಯರಾಗಿ ಆಧ್ಯಾತ್ಮಿಕ ಜ್ಞಾನದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು ತಾಳ, ತಂಬೂರಿ ಹಿಡಿದು ಶ್ರೇಷ್ಠ ಹರಿದಾಸರಾದರು ಎಂದರು.ಕೇವಲ ಚಿನ್ನ ಇದ್ದ ಮಾತ್ರಕ್ಕೆ ಆತ ದೊಡ್ಡ ವ್ಯಕ್ತಿಯಾಗುವುದಿಲ್ಲ. ಅದರ ಬದಲಿಗೆ ಚಿನ್ನದಂಥಹ ಗುಣ, ವ್ಯಕ್ತಿತ್ವ ಇರಬೇಕು. ಆಗಲೇ ವ್ಯಕ್ತಿ ತುಂಬಾ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಮಾಜದಲ್ಲಿನ ಜಾತಿ ವ್ಯವಸ್ಥೆ, ವರ್ಣಭೇದ ಹಾಗೂ ತಾರತಮ್ಯ ನೀತಿಯನ್ನು ತಮ್ಮ ಸಹಸ್ರಾರು ಕೀರ್ತನೆಗಳ ಮೂಲಕ ಕನಕದಾಸರು ಖಂಡಿಸಿದರು ಎಂದರು.
ಭಕ್ತಿ ಹಾಗೂ ಜ್ಞಾನ ಶ್ರೇಷ್ಠತೆಗೆ ಹೆಸರಾದ ಕನಕರು ಉಡುಪಿಯ ಶ್ರೀಕೃಷ್ಣನನ್ನು ಭಕ್ತಿ ಪೂರ್ವಕವಾಗಿ ಒಲಿಸಿಕೊಂಡ ಪವಾಡವೇ ರೋಚಕ. ಇಂದಿಗೂ ಸಾಕ್ಷಾತ್ ಶ್ರೀಕೃಷ್ಣನು ಪ್ರತ್ಯಕ್ಷನಾದ ಸ್ಥಳವನ್ನು ಕನಕನ ಕಿಂಡಿ ಎಂದು ಹೇಳುತ್ತಾರೆ. ಯೋಧರಾಗಿದ್ದ ಕನಕದಾಸರು ನಂತರದ ದಿನಗಳಲ್ಲಿ ಯುದ್ಧ ತಂದಿಟ್ಟ ವಿನಾಶ ಕಂಡು, ಆಧ್ಯಾತ್ಮದತ್ತ ಮುಖಮಾಡಿ, ಹಲವು ಶ್ರೇಷ್ಠ ಎನಿಸುವ ಕೀರ್ತನೆ, ಕಾವ್ಯ, ಉಗಾಭೋಗಗಳನ್ನು ರಚಿಸಿದ್ದು ಬಹು ವಿಶೇಷ ಎಂದು ತಿಳಿಸಿದರು.ಬದುಕಿನುದ್ದಕ್ಕೂ ತಾವು ಕಂಡುಂಡ ಅನುಭವದ ಸಾರ ಅವರ ಕೀರ್ತನೆಗಳಲ್ಲಿ ಮಡುಗಟ್ಟಿದೆ. ಶಾಂತಿಯಿಂದ, ತಾಳ್ಮೆಯಿಂದ ಜನರ ಮೇಲಿನ ನಂಬಿಕೆಯಿಂದ ಲೋಕದ ಡೊಂಕುಗಳನ್ನು ತಿಳಿಸಿ ಹೇಳಿ, ಅರಿವು ಮೂಡಿಸುವ ಕೆಲಸವನ್ನು ಜೀವಿತದುದ್ದಕ್ಕೂ ಮಾಡಿದರು. ಆಡು ಮಾತಿನಲ್ಲಿ ರಚಿಸಿದ ಕೀರ್ತನೆಗಳು ತತ್ವ ಸಿದ್ಧಾಂತಗಳಿಗೆ ಮಾತ್ರ ಸೀಮಿತವಾಗಿದೆ ಜನ ಸಾಮಾನ್ಯರು ನೆಮ್ಮದಿಯಿಂದ ಬದುಕಲು ಕಾರಣವಾದವು ಎಂದರು.
ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಮೊದಲಾದವರು ಇದ್ದರು.