ತಿರುಪತಿಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿರುವ ಮಾದರಿಯ ದಾಸಶ್ರೇಷ್ಠ ಕನದಾಸರ ಮೂರ್ತಿಯನ್ನುಹಾವೇರಿಯ ಕಾಗಿನೆಲೆ ವೃತ್ತದಲ್ಲಿಯೂ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕುರುಬ ಸಮುದಾಯದ ಮುಖಂಡರೂ ಆಗಿರುವ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಹಾವೇರಿ: ತಿರುಪತಿಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪಿಸಿರುವ ಮಾದರಿಯ ದಾಸಶ್ರೇಷ್ಠ ಕನದಾಸರ ಮೂರ್ತಿಯನ್ನು
ಹಾವೇರಿಯ ಕಾಗಿನೆಲೆ ವೃತ್ತದಲ್ಲಿಯೂ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕುರುಬ ಸಮುದಾಯದ ಮುಖಂಡರೂ ಆಗಿರುವ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕುರುಬ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.ಭಕ್ತಿಯ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಕನಕದಾಸರನ್ನು, ಇಡೀ ದೇಶವೇ ಕೊಂಡಾಡುತ್ತದೆ. ಕನಕದಾಸರು ಹುಟ್ಟಿ-ಬೆಳೆದ ಹಾವೇರಿ ಜಿಲ್ಲೆಯಲ್ಲಿಯೂ ಅವರ ಹೆಸರನ್ನು ಮತ್ತಷ್ಟು ಅಜರಾಮರವಾಗಿಸಬೇಕಿದೆ. ಹಲವು ಕಡೆಗಳಲ್ಲಿ ಈಗಾಗಲೇ ಅವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿಯೂ ಮೂರ್ತಿ ಬೇಕೆಂಬ ಕೂಗು ಈಗ ನನಸಾಗುತ್ತಿದೆ ಎಂದರು.ಕಾಗಿನೆಲೆ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ಅಪಘಾತಗಳು ಆಗುತ್ತಿವೆ. ಮಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಕಷ್ಟವಾಗುತ್ತದೆ. ಹೀಗಾಗಿ, ಕನಕ ಕುರಿ ಮತ್ತು ಉಣ್ಣೆ ನೇಕಾರರ ಸಹಕಾರಿ ಸಂಘಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಮೂರ್ತಿ ಇರಿಸಲಾಗುವುದು. ಮೂರ್ತಿ ಸಿದ್ಧಪಡಿಸಲು 10 ಲಕ್ಷ ರು. ಖರ್ಚಾಗಲಿದೆ. ವೃತ್ತದ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರವು 25 ಲಕ್ಷ ರು. ನೀಡಿದೆ. ಉಳಿದ ಕೆಲಸಗಳಿಗೆ 10 ಲಕ್ಷದಿಂದ 15 ಲಕ್ಷ ರು. ಬೇಕಾಗಬಹುದು. ನಾನೂ 1 ಲಕ್ಷ ರು. ಕೊಡುತ್ತೇನೆ. ಎಲ್ಲರೂ ಕೈಲಾದಷ್ಟು ದೇಣಿಗೆ ನೀಡಿ, ಮೂರ್ತಿ ಪ್ರತಿಷ್ಠಾಪಿಸೋಣ ಎಂದರು.ಕುರುಬ ಸಮುದಾಯದ ಮುಖಂಡರೂ ಆಗಿರುವ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಮಾತನಾಡಿ, ಹಾವೇರಿಯ ಕಾಗಿನೆಲೆ ವೃತ್ತದಲ್ಲಿ ತಿಂಗಳ ಒಳಗಾಗಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೆ ಸಮುದಾಯದ ಜನರು ಒಗ್ಗಟ್ಟಿನಿಂದ ಸಹಕಾರ ನೀಡಬೇಕು ಎಂದರು.ಮೂರ್ತಿ ಪ್ರತಿಷ್ಠಾಪಿಸುವ ಅವಕಾಶ ಬಂದಿದೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಕಾಗಿನೆಲೆ ಗುರುಪೀಠದಲ್ಲಿ ಈ ಬಾರಿ ಕನಕ ಜಯಂತಿ ಆಚರಿಸುವ ಜವಾಬ್ದಾರಿಯನ್ನು ಹಾವೇರಿ ತಾಲೂಕಿಗೆ ನೀಡಲಾಗಿದೆ. ಕಳೆದ ಬಾರಿ ರಾಣಿಬೆನ್ನೂರಿನವರು ಅದ್ಧೂರಿ ಆಚರಣೆ ಮಾಡಿದ್ದರು. ಈ ಬಾರಿ ನಾವೆಲ್ಲರೂ ದೇಣಿಗೆ ಸಂಗ್ರಹಿಸಿ ಅಭೂತಪೂರ್ವ ಆಚರಣೆ ಮಾಡೋಣ ಎಂದರು.ಸಮುದಾಯದ ಮುಖಂಡರಾದ ಮಹಾದೇವಗೌಡ್ರ ಗಾಜೀಗೌಡ್ರ, ನಾಗರಾಜ ಆನ್ವೇರಿ, ಅಶೋಕ ಬಣಕಾರ, ಹನುಮಂತಗೌಡ್ರ ಗಾಜೀಗೌಡ್ರ, ಬಸಣ್ಣ ಕಂಬಳಿ, ಅಶೋಕ ಮುದಕಣ್ಣನವರ, ವಿಜಯಕುಮಾರ ಮುದಕಣ್ಣನವರ, ಬಸವರಾಜ ಕೋಟಿ ಹಾಗೂ ತಾಲೂಕು ಅಧ್ಯಕ್ಷ ವೀರಪಾಕ್ಷ ಹುಲ್ಲೂರ, ನಿಂಗಪ್ಪ ತುಕ್ಕಣ್ಣನವರ ಇತರರಿದ್ದರು.