ಕೀರ್ತನೆ ಮೂಲಕ ಸಮಾಜದ ಕಣ್ತೆರಿಸಿದ ಕಾಲಜ್ಞಾನಿ ಕನಕದಾಸರು: ತನ್ವೀರ್

| Published : Nov 09 2025, 01:30 AM IST

ಕೀರ್ತನೆ ಮೂಲಕ ಸಮಾಜದ ಕಣ್ತೆರಿಸಿದ ಕಾಲಜ್ಞಾನಿ ಕನಕದಾಸರು: ತನ್ವೀರ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತರಾದವರಲ್ಲ. ಸರ್ವ ಜನಾಂಗದವರ ಕಣ್ತೆರೆಸಿದ ಸಾಧಕ. ಅವರ ಅನೇಕ ಕೀರ್ತನೆಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳು ಪ್ರತಿಬಿಂಬಿತವಾಗಿವೆ. ಅವರ ನಡೆ, ನುಡಿ, ಆಚಾರ, ವಿಚಾರಗಳು ಮತ್ತು ಅವರು ನೀಡಿದ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಆದರ್ಶಪ್ರಾಯ.

ಕನ್ನಡಪ್ರಭವಾರ್ತೆ ತಿಪಟೂರು

ಜನಸಾಮಾನ್ಯರಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮೌಲ್ಯಗಳನ್ನು ಬಿತ್ತಿದ ಮತ್ತು ತಮ್ಮ ಸರ್ವಶ್ರೇಷ್ಠ ಕೃತಿ ಮತ್ತು ಕೀರ್ತನೆಗಳ ಮೂಲಕ ಸಮಾಜದ ಕಣ್ತೆರಿಸಿದ ಕಾಲಜ್ಞಾನಿ ಕನಕದಾಸರು ಎಂದು ಕೆ.ಕೆ. ಕಾನ್ವೆಂಟ್‌ ಕಾರ್ಯದರ್ಶಿ ತನ್ವೀರ್ ಉಲ್ಲಾ ಶರೀಫ್ ತಿಳಿಸಿದರು.

ಗಾಂಧಿನಗರದಲ್ಲಿರುವ ಕೆ.ಕೆ. ಕಾನ್ವೆಂಟ್ ಆಂಗ್ಲ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೫೩೮ನೇ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತರಾದವರಲ್ಲ. ಸರ್ವ ಜನಾಂಗದವರ ಕಣ್ತೆರೆಸಿದ ಸಾಧಕ. ಅವರ ಅನೇಕ ಕೀರ್ತನೆಗಳಲ್ಲಿ ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳು ಪ್ರತಿಬಿಂಬಿತವಾಗಿವೆ. ಅವರ ನಡೆ, ನುಡಿ, ಆಚಾರ, ವಿಚಾರಗಳು ಮತ್ತು ಅವರು ನೀಡಿದ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಆದರ್ಶಪ್ರಾಯ ಎಂದರು.ಪ್ರಾಂಶುಪಾಲರಾದ ಜಹರಜಬಿನ್ ಮಾತನಾಡಿ ಕನಕದಾಸರು ಜಾತಿ, ಮತ, ವರ್ಣ, ವರ್ಗ, ಪಂಥಗಳಿಂದ ಕಲುಷಿತವಾಗಿದ್ದ ಸಮಾಜ ವ್ಯವಸ್ಥೆಯನ್ನು ಕುಲಕುಲವೆಂದು ನೀವೇಕೆ ಹೊಡೆದಾಡುವಿರೆಂಬ ಕೀರ್ತನೆಯೊಂದಿಗೆ ಬಡಿದೆಬ್ಬಿಸಿದರು. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಧೈರ್ಯದಿಂದ ಮುನ್ನುಗುತ್ತಾ ಸಾಧನೆ ಹಾದಿಯಲ್ಲಿ ಸಾಗಬೇಕು ಎಂಬ ಸಂದೇಶ ನೀಡಿದ್ದರು. ವಿದ್ಯಾರ್ಥಿಗಳಾದ ನೀವು ಶಿಕ್ಷಣದ ಜತೆಗೆ ಇಂತಹ ಮಹಾನ್ ವ್ಯಕ್ತಿಗಳ ಆದರ್ಶ, ಮೌಲ್ಯ, ಸಾಹಿತ್ಯ, ಸಂಗೀತವನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಪಿ.ರಮೇಶ್‌ ಅವರು ಕನಕದಾಸರ ಜೀವನ ವೃತ್ತಾಂತವನ್ನು ವಿದ್ಯಾರ್ಥಿಗಳಿಗೆ ವಿಸ್ತಾರವಾಗಿ ತಿಳಿಸಿದರು. ಮುಖ್ಯ ಶಿಕ್ಷಕ ಪರಮೇಶ್ವರ್, ಶೈಕ್ಷಣಿಕ ಆಡಳಿತಾಧಿಕಾರಿ ಸುಮಾ ಸೇರಿ ಸಹ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.