ಕನಕದಾಸರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ: ಎನ್.ಚಲುವರಾಯಸ್ವಾಮಿ

| Published : Nov 19 2024, 12:46 AM IST

ಸಾರಾಂಶ

ಅಸ್ಪೃಶ್ಯತೆ ಹೋಗಲಾಡಿಸಲು, ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಬಡಜನರಿಗೆ ಸಾಮಾಜಿಕ ನ್ಯಾಯ ಮತ್ತು ಮೂಲಸೌಕರ್ಯ ಸಿಗಬೇಕೆಂಬ ಆಶಯ ಹೊಂದಿದ್ದ ಬಸವಣ್ಣ, ಕನಕದಾಸರು, ಕುವೆಂಪು ಸೇರಿದಂತೆ ಅನೇಕ ಮಂದಿ ಸಮಾಜ ಚಿಂತಕರ ದೂರದೃಷ್ಟಿ ಚಿಂತನೆಯ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಜನಪರ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ ಸಂತ ಶ್ರೇಷ್ಠ ಭಕ್ತ ಕನಕದಾಸರು ತಮ್ಮ ಜೀವಿತಾವಧಿ ಉದ್ದಕ್ಕೂ ಮನುಕುಲದ ಒಳಿತಿಗಾಗಿಯೇ ಶ್ರಮಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಆಡಳಿತಸೌಧದ ಒಳಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಶ್ರೇಷ್ಠ ಭಕ್ತಕನಕ ದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಅಸ್ಪೃಶ್ಯತೆ ಹೋಗಲಾಡಿಸಲು, ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಬಡಜನರಿಗೆ ಸಾಮಾಜಿಕ ನ್ಯಾಯ ಮತ್ತು ಮೂಲಸೌಕರ್ಯ ಸಿಗಬೇಕೆಂಬ ಆಶಯ ಹೊಂದಿದ್ದ ಬಸವಣ್ಣ, ಕನಕದಾಸರು, ಕುವೆಂಪು ಸೇರಿದಂತೆ ಅನೇಕ ಮಂದಿ ಸಮಾಜ ಚಿಂತಕರ ದೂರದೃಷ್ಟಿ ಚಿಂತನೆಯ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಜನಪರ ಕೆಲಸ ಮಾಡುತ್ತಿದೆ ಎಂದರು.

ನಾಡಿನ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆ ಜೊತೆಗೆ ದಾಸ ಸಾಹಿತ್ಯ ಕ್ಷೇತ್ರಕ್ಕೆ ಸಂತಶ್ರೇಷ್ಠ ಕನಕದಾಸರ ಕೊಡುಗೆ ಅಪಾರ. ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಜಗತ್ತಿನ ಎರಡು ಕಣ್ಣುಗಳಿದ್ದಂತೆ. ಇಂತಹ ಸಾಹಿತ್ಯವನ್ನು ಪರಿಚಯಿಸಿದ ಸಂತ ಶ್ರೇಷ್ಠ ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತವಾಗಿರಲಿಲ್ಲ. ಐನೂರು ವರ್ಷ ಕಳೆದರೂ ಕೂಡ ಕನಕದಾಸರನ್ನು ಸ್ಮರಿಸುತ್ತೇವೆಂದರೆ ಅವರ ಸಾಧನೆ ಎಷ್ಟಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ಕನಕದಾಸರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ತಾಲೂಕಿನ ದಾಸರಹಳ್ಳಿ ಉಪನ್ಯಾಸಕ ಹಾಗೂ ಲೇಖಕ ಡಿ.ಪಿ.ಚಿಕ್ಕಣ್ಣ ಪ್ರಧಾನ ಭಾಷಣ ಮಾಡಿದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಬಳಿಕ ಲೇಖಕ ಹಾಗೂ ಉಪನ್ಯಾಸಕ ಡಿ.ಪಿ.ಚಿಕ್ಕಣ್ಣ ರಚಿಸಿರುವ ‘ತೇಜಸ್ಸಿನ ಅಲೆ’ ಕವನ ಸಂಕಲನದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಇದಕ್ಕೂ ಮುನ್ನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಸವೇಗೌಡ, ಬಿದರಕೆರೆ ಮಂಜೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಚಲುವರಾಜು, ಬಿಇಒ ಯೋಗೇಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕ್ಷೇತ್ರ ಸಮನ್ವಾಧಿಕಾರಿ ಕೆ.ರವೀಶ್, ಸಿಡಿಪಿಒ ಕೃಷ್ಣಮೂರ್ತಿ, ಸಿಪಿಐ ನಿರಂಜನ್, ಜಿಪಂ ಮಾಜಿ ಸದಸ್ಯೆ ಸಾವಿತ್ರಮ್ಮ, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಮುಖಂಡರಾದ ಎಚ್.ಟಿ. ಕೃಷ್ಣೇಗೌಡ, ಕೊಣನೂರು ಹನುಮಂತು, ಸಿದ್ದರಾಮು, ರಮೇಶ್, ರಾಘವೇಂದ್ರ, ಚಿಕ್ಕಮ್ಮ, ಪುಟ್ಟಮ್ಮ ಮಾಯಣ್ಣಗೌಡ ಸೇರಿದಂತೆ ಹಲವರು ಇದ್ದರು.