ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರದೊಂದಿಗೆ ಸಂಗೀತ ಮತ್ತು ದೇವತಾರಾಧನೆಯನ್ನು ಕಾಂಚನ ಕುಟುಂಬ ಮೈಗೂಡಿಸಿಕೊಂಡಿದೆ, ಸಂಗೀತಕ್ಕಾಗಿ ಈ ಕುಟುಂಬ ಎಲ್ಲವನ್ನೂ ಧಾರೆ ಎರೆದಿದೆ, ಹೀಗಾಗಿ ಕಾಂಚನ ಎಂಬ ಪುಟ್ಟ ಹಳ್ಳಿ ಇಂದು ದೇಶದಾದ್ಯಂತ ಪರಿಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಉಪ್ಪಿನಂಗಡಿ: ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರದೊಂದಿಗೆ ಸಂಗೀತ ಮತ್ತು ದೇವತಾರಾಧನೆಯನ್ನು ಕಾಂಚನ ಕುಟುಂಬ ಮೈಗೂಡಿಸಿಕೊಂಡಿದೆ, ಸಂಗೀತಕ್ಕಾಗಿ ಈ ಕುಟುಂಬ ಎಲ್ಲವನ್ನೂ ಧಾರೆ ಎರೆದಿದೆ, ಹೀಗಾಗಿ ಕಾಂಚನ ಎಂಬ ಪುಟ್ಟ ಹಳ್ಳಿ ಇಂದು ದೇಶದಾದ್ಯಂತ ಪರಿಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸಂಗೀತ ರತ್ನ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ೧೦೫ನೇ ಜನ್ಮವರ್ಷ ಮಹೋತ್ಸವ ಹಾಗೂ ೭೨ನೇ ವರ್ಷದ ಕಾಂಚನೋತ್ಸವ-೨೦೨೬ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತನ್ನೆಲ್ಲವನ್ನೂ ಸಂಗೀತಕ್ಕಾಗಿ ಮುಡಿಪಾಗಿಟ್ಟು ಶ್ರಮದಿಂದ ಈ ಕ್ಷೇತ್ರವನ್ನು ಇಷ್ಟು ಎತ್ತರಕ್ಕೆ ತಂದಿದ್ದಾರೆ, ಇಲ್ಲಿ ಸಾವಿರಾರು ಪ್ರತಿಭೆಗಳು ಸೃಷ್ಠಿಯಾಗಿ ದೇಶದಾದ್ಯಂತ ಹೆಸರು ಪಡೆಯುತ್ತಿದ್ದಾರೆ, ಇನ್ನೂ ನೂರಾರು ಪ್ರತಿಭೆಗಳು ಇಲ್ಲಿಂದ ಹೊರಹೊಮ್ಮಲಿ ಎಂದರು.ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ಇಲ್ಲಿ ನಡೆಯುವ ಕಾರ್ಯಕ್ರಮ ಕಲೆಗಾಗಿ ಮತ್ತು ಕಲಿಯುವವರಿಗಾಗಿ ಆಗಿರುತ್ತದೆ. ದೇಶದ ಶ್ರೇಷ್ಠ ಪೀಟೀಲು ವಾದಕ ಎಲ್. ಸುಬ್ರಹ್ಮಣ್ಯಂ ಅವರಂತೆ ಆಗಬಹುದಾದ ನೂರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ, ಅವರಿಗೆ ಪ್ರೇರಣೆ, ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ನಾವು ಕಾಂಚನ ಕುಟುಂಬದ ಸಂಂಗೀತ ಪರಂಪರೆಯನ್ನು ಉಳಿಸಿಕೊಳ್ಳಲು ಕೈಜೋಡಿಸಬೇಕಾಗಿದೆ ಎಂದರು.ದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ಅವರು ಪದ್ಮವಿಭೂಷಣ ಎಲ್. ಸುಬ್ರಹ್ಮಣ್ಯಂ ಅವರ ಪರವಾಗಿ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಅವರಿಗೆ ಕಾಂಚನಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಂಗೀತ ಕೇವಲ ಮನರಂಜನೆ ಅಲ್ಲ, ಸಂಗೀತ ಮೋಕ್ಷದ ಮಾರ್ಗವಾಗಿದೆ, ಇಲ್ಲಿ ಸನಾತನ ಸಂಸ್ಕೃತಿಯ ಅನಾವರಣ ಆಗಿದೆ ಎಂದರು.ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹದೊಂದು ಕ್ಷೇತ್ರ ಇದೆ, ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆ ಎನ್ನುವುದಕ್ಕೆ ಹೆಮ್ಮೆ ಆಗುತ್ತಿದೆ, ಇಂತಹ ಸಂಸ್ಕಾರ, ಸಂಸ್ಕೃತಿಯ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ, ಕಾಂಚನ ಕುಟುಂಬ ಸದಸ್ಯರಾದ ವಕೀಲ ರಾಜಶೇಖರ್ ಹಿಲ್ಯಾರು, ಕೆ.ಯು. ಜಯಚಂದ್ರ ರಾವ್ ಮಾತನಾಡಿದರು.

ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ನೆಕ್ಕರಾಜೆ, ಪದ್ಮನಾಭ ತಂತ್ರಿ, ನಿತ್ಯಾನಂದ ರಾವ್, ಸಂಜಯ್ ಬೆಂಗಳೂರು, ಸ್ಥಳೀಯ ಪ್ರಮುಖರಾದ ಸುನಿಲ್ ಕುಮಾರ್ ದಡ್ಡು, ಅರುಣ್‌ಶ್ಯಾಂ, ವಿಧ್ಯಾಧರ ಜೈನ್, ಶ್ರೀಧರ ಗೌಡ ನಡ್ಪ, ಮುಕುಂದ ಗೌಡ, ಸದಾನಂದ ನೆಕ್ಕಿಲಾಡಿ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ, ಕಾಂಚನ ಶ್ರುತಿರಂಜಿನಿ, ಕಾಂಚನ ಸುಮನಸರಂಜಿನಿ ಇದ್ದರು.

ಕಾಂಚನ ಮನೆಯಿಂದ ಸಂಗೀತ ಶಾಲೆ ತನಕ ಉಂಛವೃತ್ತಿ: ಬೆಳಗ್ಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನ ಕೀರ್ತನೆಗಳ ಗಾಯನ-ವಾದನಗಳೊಂದಿಗೆ ವಿದುಷಿ ಚಾರುಲತಾ ರಾಮಾನುಜಂ ಅವರ ನೇತೃತ್ವದಲ್ಲಿ ''''''''''''''''ಉಂಛವೃತ್ತಿ ನಡೆಯಿತು. ಬಳಿಕ ಪಿಳ್ಳಾರಿಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಕಾಂಚನ ಸಂಗೀತ ಕಲಾಶಾಲೆಯ ಶಿಷ್ಯರು, ಪ್ರಶಿಷ್ಯರು ಹಾಗೂ ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ರಾತ್ರಿ ಖ್ಯಾತ ಕಲಾವಿದರಿಂದ ಪದ್ಮಶ್ರೀ ಕವಿತಾಕೃಷ್ಣಮೂರ್ತಿ ಸುಬ್ರಹ್ಮಣ್ಯಂ, ಅಂಬಿ ಸುಬ್ರಹ್ಮಣ್ಯಂ ಅವರಿಂದ ಸುರ-ಸಂಗೀತ ನಡೆಯಿತು.

ರೋಹಿಣಿ ಸುಬ್ಬರತ್ನಂ ಅವರಿಗೆ ಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ಪ್ರಶಸ್ತಿ ಘೋಷಣೆ: ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ನೀಡುವ ಜಿಲ್ಲೆಯ ಕಲಾವಿಮರ್ಶಕ ಎ.ಈಶ್ವರಯ್ಯ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಈ ವರ್ಷ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್‌ ಕಾರ್ಯದರ್ಶಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರಿಗೆ ನೀಡುತ್ತಿರುವುದಾಗಿ ಅಕಾಡೆಮಿ ಕಾರ್ಯದರ್ಶಿ ನಿತ್ಯಾನಂದ ರಾವ್ ಅವರು ಸಮಾರಂಭದಲ್ಲಿ ಪ್ರಕಟಿಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ ೨೧ನೇ ವರ್ಷಾಚರಣೆ ಆಚರಿಸುತ್ತಿದೆ. ನವೆಂಬರ್ ತಿಂಗಳಿನಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು. ರಘುನಂದನ್ ಸ್ವಾಗತಿಸಿ, ಮೋಹನಚಂದ್ರ ವಂದಿಸಿದರು. ಮಹೇಶ್ ಕಜೆ, ಗಣರಾಜ ಕುಂಬ್ಳೆ ನಿರೂಪಿಸಿದರು.