ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಎಲ್ಲರೂ ಅವರವರ ಕುಲ ಧರ್ಮಗಳನ್ನು ಆಚರಿಸುವ ಮೂಲಕ ಹಿಂದೂ ಧರ್ಮವನ್ನು ಬಲಗೊಳಿಸಬೇಕು ಎಂದು ಶ್ರೀ ಕಾಂಚೀ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

ಪುತ್ತೂರು: ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಎಲ್ಲರೂ ಅವರವರ ಕುಲ ಧರ್ಮಗಳನ್ನು ಆಚರಿಸುವ ಮೂಲಕ ಹಿಂದೂ ಧರ್ಮವನ್ನು ಬಲಗೊಳಿಸಬೇಕು ಎಂದು ಶ್ರೀ ಕಾಂಚೀ ಕಾಮಕೋಟಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.ಪುತ್ತೂರು ಸಮೀಪದ ಮಾಣಿ-ಪೆರಾಜೆಯ ಶ್ರೀರಾಮಚಂದ್ರಾಪುರ ಮಠದ ಶಾಖೆಗೆ ಭೇಟಿ ನೀಡಿದ ಅವರು, ಶ್ರೀಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ, ನೂತನ ಪುಷ್ಪ ರಥಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಕುಲ ದೇವರು ಹಾಗೂ ಕುಲ ಗುರುಗಳ ನೆನಪು ಪ್ರತಿಯೊಬ್ಬರಲ್ಲಿ ಇರಬೇಕು. ಆಚರಣೆಗಳನ್ನು ಕಾಲಕಾಲಕ್ಕೆ ನಡೆಸಿದಾಗ ಮಾತ್ರ ನಮ್ಮ ಏಳಿಗೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಧರ್ಮ ಜಾಗೃತಿ ಹಾಗೂ ಸಂಘಟನೆಗಾಗಿ ವಲಯ - ಮಂಡಲ ಎಂಬತೆ ವಿಶಿಷ್ಟ ರೀತಿಯಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀಗಳು ಸಂಘಟಿಸಿರುವುದು ಶ್ಲಾಘನೀಯವಾಗಿದ್ದು, ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿ ಹವ್ಯಕ ಸಮುದಾಯವು ಈ ನಾಡಿನಲ್ಲಿ ಧರ್ಮ ಸಂರಕ್ಷಣಾ ಕಾರ್ಯವನ್ನು ದೊಡ್ಡ ರೀತಿಯಲ್ಲಿ ನಿರ್ವಹಿಸುತ್ತಿರುವುದು ಅಭಿನಂದನೀಯವಾಗಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ‌ ಮಹಾಸ್ವಾಮಿಗಳು ಮಾತನಾಡಿ, ಪ್ರತಿ ಮನೆಯಲ್ಲಿ ಆರೋಗ್ಯ - ನೆಮ್ಮದಿ ಇರಬೇಕು. ಆಹಾರ ಶುದ್ಧತೆಯಿಂದ ಜೀವನ ಶುದ್ಧವಾಗುತ್ತದೆ. ''''ತೋಟದಲ್ಲಿ ಅಡಿಕೆ, ಮನೆಯಲ್ಲಿ ಅಡಿಗೆ ಎರಡು ಮುಖ್ಯ'''' ಎಂದು ಕಾಂಚೀ ಗುರುಗಳು ನೀಡಿರುವ ಸಂದೇಶವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಧರ್ಮ-ಸಂಸ್ಕೃತಿಗಳನ್ನು ರಕ್ಷಿಸುವುದು ಶಿಷ್ಯರೆಲ್ಲರ ಹೊಣೆಯಾಗಿದ್ದು, ಪರಂಪರೆಯನ್ನು ಉಳಿಸುವ ಜತೆಗೆ ಸಮಾಜ ಸಂರಕ್ಷಣೆಯಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.

ಶ್ರೀ ರಾಮಚಂದ್ರಾಪುರ ಮಠ‌ ಹಾಗೂ ಕಾಂಚಿ ಮಠಕ್ಕೆ ಪಾರಂಪರ್ಯವಾಗಿ ಉತ್ತಮ ಸಂಬಂಧವಿದ್ದು, ಹಿಂದೆ ಕೆಕ್ಕಾರು ಹಾಗೂ ತೀರ್ಥಹಳ್ಳಿಯ ಮಠಗಳಿಗೆ ಕಾಂಚಿ ಶ್ರೀಗಳು ಭೇಟಿ ನೀಡಿದ ಉದಾಹರಣೆ ಇದೆ. ಇದೀಗ ಪುತ್ತೂರಿನ ಮಾಣಿ ಮಠಕ್ಕೆ ಭೇಟಿ ನೀಡಿದ್ದು, ಉಭಯ ಮಠಗಳು ಉತ್ತಮವಾದ ಬಾಂಧವ್ಯವನ್ನು ಹೊಂದಿದೆ ಎಂದು ಕಾಂಚಿ ಹಾಗೂ ಶ್ರೀರಾಮಚಂದ್ರಾಪುರ ಮಠಗಳ ಸಂಬಂಧವನ್ನು ನೆನಪಿಸಿದರು.

ಇದೇ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದಿಂದ ಕಾಂಚಿ ಸ್ವಾಮಿಗಳಿಗೆ ಸಾಲಿಗ್ರಾಮ ಸಹಿತ ಸ್ವರ್ಣ ಖಚಿತ ರುದ್ರಾಕ್ಷಿಯ ಹಾರ ಸಮರ್ಪಣೆ ಮಾಡಲಾಯಿತು. ಕಾಂಚೀ ಮಠದಿಂದ ರಾಘವೇಶ್ವರ ಶ್ರೀಗಳಿಗೆ ಉಪಾಯನದ ಸಮರ್ಪಣೆ ನಡೆಯಿತು. ಪೆರಾಜೆ ಮಠದ ಶ್ರೀದೇವರ ನೂತನ ಪುಷ್ಪ ರಥೋತ್ಸವಕ್ಕೆ ಕಂಚಿ ಶ್ರೀಗಳು ಚಾಲನೆ ನೀಡಿದರು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಕರ್ನಾಟಕ ಮಾನವ ಹಕ್ಕುಗಳ ಆಯೋಗ್ಯದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹಿರಿಯ ವಕೀಲರಾದ ಡಾ. ಅರುಣ್ ಶ್ಯಾಮ್, ರಾಜಶೇಖರ್ ಹಿಲ್ಯಾರ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಶಾಸನತಂತ್ರ ಕಾರ್ಯದರ್ಶಿ ಕೃಷ್ಣಪ್ರಸಾದ್ ಎಡಪ್ಪಾಡಿ, ಮಾಣಿ ಪೆರಾಜೆ ಮಠದ ಕ್ರಿಯಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.