ದಕ್ಷಿಣದ ತಿರುವಾಯೂರ್ ಎಂದೇ ಪ್ರಸಿದ್ದ್ದಿ ಪಡೆದ ಕಾಂಚನದ ಕಾಂಚನೋತ್ಸವದ ಸಂಭ್ರಮ

ಉಪ್ಪಿನಂಗಡಿ: ಶತಮಾನದಿಂದ ಸಂಗೀತ ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಮರ್ಪಣಾ ಭಾವದಿಂದ ಶ್ರಮಿಸುತ್ತಿರುವ ಕಾಂಚನ ಮನೆತನ ದೇಶದ ಆಸ್ತಿಯಾಗಿ ಹೊರ ಹೊಮ್ಮಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಪಾದಿಸಿದರು. ದಕ್ಷಿಣದ ತಿರುವಾಯೂರ್ ಎಂದೇ ಪ್ರಸಿದ್ದ್ದಿ ಪಡೆದ ಕಾಂಚನದ ಕಾಂಚನೋತ್ಸವದ ಸಂಭ್ರಮದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ, ಋಷಿಗಂಧರ್ವ ವಿ.ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ೧೦೫ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಸಂಗೀತವು ಕೂಡಾ ಧರ್ಮದ ಬೇರಾಗಿದೆ. ಗ್ರಾಮೀಣ ಪ್ರದೇಶವಾದರೂ ಕಾಂಚನ ಸಂಗೀತದ ಮೂಲಕ ದೇಶದಾದ್ಯಂತ ಹೆಸರು ಗಳಿಸಿದೆ. ಇಲ್ಲಿನ ಸಂಗೀತ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆ, ದೇಶದಾದ್ಯಂತ ಇರುವ ಸಂಗೀತ ಕ್ಷೇತ್ರದ ಬಹಳಷ್ಟು ವಿದ್ವಾಂಸರು ಈ ಕಾಂಚನದಿಂದ ಮೂಡಿಬಂದವರು. ಹೀಗಿರುವಾಗ ಕಾಂಚನದ ಮಹಿಮೆಯನ್ನು ಉಳಿಸಿಕೊಂಡು ಸಂಗೀತ ಲೋಕಕ್ಕೆ ಶಕ್ತಿ ಕೊಡಬೇಕಾಗಿದೆ ಎಂದರು.

ಎಲ್ಲೆಲ್ಲೂ ಸಂಗೀತ: ರಾಘವೇಶ್ವರ ಭಾರತೀ ಶ್ರೀ

ಅಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಕಾಂಚನ ಎಂಬ ಈ ಊರು ಜಗತ್ ಪ್ರಸಿದ್ಧವಾಗಿದೆ, ಇಲ್ಲಿನ ಮಣ್ಣು, ನೀರು, ಗಾಳಿ, ಎಲ್ಲೆಲ್ಲೂ ಸಂಗೀತ ಇದೆ, ಇದೊಂದು ಮಾದರಿ ಗುರುಕುಲದಂತಿದೆ. ಕಾಂಚನ ಸಂಗೀತ ಶಾಲೆಗೆ ಪರಂಪರೆ ಇದೆ, ಸಂಗೀತ ಮೋಕ್ಷ ವಿದ್ಯೆ ಯಾಗಿದ್ದು, ಕಾಂಚನ ಕುಟುಂಬದ ಉಸಿರಾಟ, ಊಟ ಎಲ್ಲವೂ ಸಂಗೀತವೇ ಆಗಿದೆ, ಬದುಕಿನಲ್ಲಿರುವ ನೋವು ದೂರ ಮಾಡಲು ಮತ್ತು ಆನಂದವನ್ನು ಅನುಭವಿಸಲು ಮತ್ತು ಕೊಡಲು ಸಾಧ್ಯವಾಗುವ ಪ್ರಭಾವಶಾಲಿಯಾದ ಸಂಗೀತವನ್ನು ಅದರ ಶುದ್ದತೆ ಉಳಿಸಿಕೊಂಡು ಬೆಳೆಸಿದ ಕೀರ್ತಿ ಕಾಂಚನ ಮನೆತನದ್ದಾಗಿದೆ ಎಂದರು. ಸಂಗೀತ ಹಾಡುವುದು ಮತ್ತು ಹೇಳಿಕೊಡುವುದರ ಮೂಲಕ ಸಂಗೀತ ಉಳಿಸಲು ಸಾಧ್ಯ, ಆ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ಪೂರ್ವಜ ಕುಟುಂಬದವರು ಸ್ಥಾಪನೆ ಮಾಡಿರುವ ಈ ಸಂಸ್ಥೆ ಇಂದು ರೋಹಿಣಿ ಸುಬ್ಬರತ್ನಂ ಕುಟುಂಬ ಮುನ್ನಡೆಸುತ್ತಾ ಬಂದಿದೆ, ಇದನ್ನು ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಮ್ಮೆಲರ ಹೊಣೆಯಾಗಿದೆ ಎಂದರು.ಸಂಗೀತ ಕಂಪು ಹರಿಸಿದ ಕಾಂಚನ: ಡಾ.ಹೆಗ್ಗಡೆ

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಡಾ. ಡಿ ವೀರೇಂದ್ರ ಹೆಗ್ಗಡೆ ಮಾತನಾಡಿ ತಮಿಳುನಾಡಿನಿಂದ ಬಂದು ಕನ್ನಡ ಭಾಷಿಗರಾಗಿ ಕಾಂಚನ ಎಂಬ ಊರಿನಲ್ಲಿ ಸಂಗೀತದ ಕಂಪನ್ನು ಪ್ರಸಹರಿಸಿದ ಕಾಂಚನ ಮನೆತನದವರ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು. ಹಲವಾರು ಸಂಗೀತ ದಿಗ್ಗಜರನ್ನು ನೀಡಿದ ಕಾಂಚನ ದಕ್ಷಿಣ ಭಾರತದ ತಿರುವಯನ್ನೂರು ಎನ್ನುವುದರಲ್ಲಿ ತಪ್ಪಿಲ್ಲ. ಸಂಗೀತ ಕ್ಷೇತ್ರ ಬಹಳ ಖುಷಿ ಕೊಡುವ ಮತ್ತು ಬಹಳ ಕಷ್ಟದ ಕೆಲಸ. ಆದರೆ ಇವರ ಕುಟುಂಬ ಇದನ್ನು ಉಳಿಸಿಕೊಂಡು ಬಂದಿದೆ, ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು.ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿ ಸಂಗೀತ ಕ್ಷೇತ್ರಕ್ಕೆ ಕಾಂಚನ ಮನೆತನದವರ ಕೊಡುಗೆಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಜಶೇಖರ್ ಹೀಲ್ಯಾರ್, ನಾಗರತ್ನ, ಉಪಸ್ಥಿತರಿದ್ದರು. ಇದೇ ವೇಳೆ ರೋಹಿಣಿ ಸುಬ್ಬರತ್ನಂ ಬರೆದ ಕಾಂಚನ ಪರಂಪರೆ - ಸಂಗೀತ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. ಸಮಾರಂಭದಲ್ಲಿ ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆ, ಶ್ರೇಯಸ್ ಕುಮಾರ್, ವಿನಯ ಕುಮಾರ್ ಸೊರಕೆ, ಹರೀಶ್ ಕುಮಾರ್, ರಾಜಾರಾಮ ಕೆ ಬಿ, ಕೌಶಲ್ ಪ್ರಸಾದ್ ಶೆಟ್ಟಿ, ಧನ್ಯ ಕುಮಾರ್ ರೈ ಮೊದಲಾದವರು ಭಾಗವಹಿಸಿದ್ದರು. ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ ರೋಹಿಣಿ ಸುಬ್ಬರತ್ನಂ ಸ್ವಾಗತಿಸಿದರು. ಜಯಚಂದ್ರ ವಂದಿಸಿದರು. ಮಹೇಶ್ ಕಜೆ, ಗಣರಾಜ ಕುಂಬ್ಳೆ, ಮೋಹನಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿದರು.