ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಜ್ಯೋತಿ ರಥಯಾತ್ರೆ ಫೆ.5ರಂದು ಹಾಗೂ ಸಂವಿಧಾನ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರವು ಫೆ.7 ರಂದು ಕೊಲ್ಹಾರ ತಾಲೂಕಿಗೆ ಆಗಮಿಸುತ್ತಿದೆ. ಅವುಗಳನ್ನು ಭವ್ಯವಾಗಿ ಸ್ವಾಗತಿಸಿ ,ವಿಜೃಂಭಣೆಯಿಂದ ಕಾರ್ಯಕ್ರಮ ಆಚರಿಸಿ ನಂತರ ಅವುಗಳನ್ನು ಬೀಳ್ಕೊಡಲಾಗುವುದು ಎಂದು ತಹಸೀಲ್ದಾರ ಎಸ್.ಎಸ್.ನಾಯಕಲ್ ಮಠ ಹೇಳಿದರು.ಇಲ್ಲಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಕರ್ನಾಟಕ ಎಂದು ಮರುನಾಮಕರಣವಾದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ , ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಜ್ಯೋತಿ ರಥ ಯಾತ್ರೆಯು ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು ಅದು ಬಬಲೇಶ್ವರ ತಾಲೂಕಿನಿಂದ ಕೊಲ್ಹಾರ ತಾಲೂಕಿಗೆ ಫೆ.5ರಂದು ರೋಣಿಹಾಳ, ಗರಸಂಗಿ ಮಾರ್ಗವಾಗಿ ಆಗಮಿಸಿ ಕೊಲ್ಹಾರ ಪಟ್ಟಣದಲ್ಲಿ ವಾಸ್ತವ್ಯ ಮಾಡುವುದು. ನಂತರ ಫೆ.6 ರಂದು ಕೊಲ್ಹಾರದಿಂದ ಬಳೂತಿ, ಹಣಮಾಪೂರ, ಮಟ್ಟಿಹಾಳ ಮಾರ್ಗವಾಗಿ ಸಂಚರಿಸ ತೆಲಗಿಯಲ್ಲಿ ವಾಸ್ತವ್ಯ ಮಾಡುವುದು. ಫೆ.7 ರಂದು ತೆಲಗಿ, ಮಸೂತಿ, ಕೂಡಗಿ, ಮುತ್ತಗಿ ಮಾರ್ಗವಾಗಿ ಬಸವನ ಬಾಗೇವಾಡಿ ತಾಲೂಕಿಗೆ ತೆರಳುವುದು ಎಂದು ವಿವರಿಸಿದರು.ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಸಂವಿಧಾನ ಜಾಗೃತಿ ಮೂಡಿಸುವ ಸಲುವಾಗಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಮೆರವಣಿಗೆಯು ಸಾರವಾಡದಿಂದ ಫೆ.7ರಂದು ಕೊಲ್ಹಾರ ತಾಲೂಕಿನ ಮುಳವಾಡಕ್ಕೆ ಆಗಮಿಸಿ ತಳೇವಾಡ ಮೂಲಕ ಸಾಗಿ ಮಸೂತಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದು. ಫೆ.8 ರಂದು ಮಸೂತಿಯಿಂದ ಮಲಘಾಣ, ರೋಣಿಹಾಳ ಮಾರ್ಗವಾಗಿ ಸಾಗಿ ಕೊಲ್ಹಾರ ಪಟ್ಟಣದಲ್ಲಿ ಗ್ರಾಮ ವಾಸ್ತವ್ಯ ಮಾಡುವುದು. ಫೆ.9ರಂದು ಕೊಲ್ಹಾರದಿಂದ ಹಣಮಾಪೂರ, ಸಿದ್ದನಾಥ ಆರ್.ಸಿ, ಅರಿಷಣಗಿ, ತೆಲಗಿ ಮಾರ್ಗವಾಗಿ ಸಾಗಿ ಕೂಡಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದು. ಫೆ.10 ರಂದು ಕೂಡಗಿಯಿಂದ ಮುತ್ತಗಿ ಮಾರ್ಗವಾಗಿ ಸಾಗಿ ಬಸವನ ಬಾಗೇವಾಡಿ ತಾಲೂಕಿಗೆ ಬೀಳ್ಕೊಡಲಾಗುವುದು ಎಂದು ಹೇಳಿದರು.
ಭಾರತದ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥವು ಕೊಲ್ಹಾರ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ತೆರಳುವುದು. ಆ ಸಂದರ್ಭದಲ್ಲಿ ಭವ್ಯವಾಗಿ ಸ್ವಾಗತಿಸಿ ನಾಗರಿಕರಿಗೆ ಸಂವಿಧಾನ ಪೀಠಿಕೆ ಓದಿಸಿ, ಜಾಗೃತಿ ಮೂಡಿಸುವುದು ಎಂದರು.ಇದಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರ ಜೊತೆಗೆ ಸರ್ಕಾರದ 5 ಗ್ಯಾರಂಟಿಗಳ ಸಮಾವೇಶವನ್ನು ಆಯೋಜಿಸಲು ತಿಳಿಸಲಾಗಿತ್ತು. ಕೊಲ್ಹಾರ, ನಿಡಗುಂದಿ, ಬಸವನ ಬಾಗೇವಾಡಿ ಹೋಬಳಿಗಳನ್ನು ಸೇರಿಸಿ ಅದನ್ನು ಫೆ.11 ರಂದು ನಿಡಗುಂದಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.