ಗಡಿ ಬಗ್ಗೆ ಪದೇ ಪದೇ ಕ್ಯಾತೆ ತೆಗೆದು ವಿವಾದ ಹುಟ್ಟುಹಾಕುವ ಎಂಇಎಸ್‌ಗೆ ಸೆಡ್ಡು ಹೊಡೆದು ಕರವೇಯ ಪ್ರವೀಣ್ ಶೆಟ್ಟಿ ಬಣ, ‘ಬೆಳಗಾವಿ ಉತ್ಸವ’ ಹೆಸರಿನಲ್ಲಿ ಕನ್ನಡದ ಹಬ್ಬ ಆಚರಿಸುತ್ತಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಡಿ ಬಗ್ಗೆ ಪದೇ ಪದೇ ಕ್ಯಾತೆ ತೆಗೆದು ವಿವಾದ ಹುಟ್ಟುಹಾಕುವ ಎಂಇಎಸ್‌ಗೆ ಸೆಡ್ಡು ಹೊಡೆದು ಕರವೇಯ ಪ್ರವೀಣ್ ಶೆಟ್ಟಿ ಬಣ, ‘ಬೆಳಗಾವಿ ಉತ್ಸವ’ ಹೆಸರಿನಲ್ಲಿ ಕನ್ನಡದ ಹಬ್ಬ ಆಚರಿಸುತ್ತಿದೆ.ಬೆಳಗಾವಿಯ ಸರದಾರ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಡಾಲಿ ಧನಂಜಯ, ನೀನಾಸಂ ಸತೀಶ್, ಸಪ್ತಮಿಗೌಡ ಸೇರಿ ಕನ್ನಡದ ಸ್ಟಾರ್ ನಟರು, ನಟಿಯರು ಆಗಮಿಸಿ, ಉತ್ಸವಕ್ಕೆ ಮೆರುಗು ನೀಡಿದರು. ಆ ಮೂಲಕ ಕನ್ನಡ ಚಿತ್ರರಂಗ ಸದಾ ನಾಡು, ನುಡಿ, ಜಲದ ವಿಚಾರದಲ್ಲಿ ಬೆಂಬಲಕ್ಕೆ ನಿಂತಿದೆ ಎಂದು ತೋರಿಸಿಕೊಟ್ಟರು. ಉತ್ಸವದ ಅಂಗವಾಗಿ ನಗರದ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿಗೆ ಸ್ಟಾರ್ ನಟರಿಂದ ಮಾಲಾರ್ಪಣೆ ನಡೆಯಿತು. ಸಂಜೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಕೂಡ ನಡೆಯಿತು.
ಈ ವೇಳೆ, ನೀನಾಸಂ ಸತೀಶ್ ಮಾತನಾಡಿ, ಅಣ್ಣನವರ ಕಾಲದಿಂದಲೂ ಚಿತ್ರರಂಗದವರು ಕನ್ನಡಿಗರ ಜೊತೆಗೆ ಇದ್ದಾರೆ ಎಂದರು. ಡಾಲಿ ಮಾತನಾಡಿ, ನಾಡು, ನುಡಿ ವಿಚಾರದಲ್ಲಿ ಪ್ರೊಡಕ್ಟಿವ್ ಆಗಿ ಏನು ಮಾಡಬೇಕು, ಅದನ್ನು ಮಾಡ್ತೀವಿ ಎಂದರು.ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಬಾವುಟ ರಾರಾಜಿಸುತ್ತಿದೆ. ಕನ್ನಡದ ನಟರು ಬೆಳಗಾವಿಗೆ ಬಂದಿದ್ದು, ಖುಷಿ ಆಗುತ್ತಿದೆ. ಬೆಳಗಾವಿ ಡಿಸಿ ವಿರುದ್ಧ ಲೋಕಸಭೆಯ ಸ್ಪೀಕರ್‌ಗೆ ದೂರು ಕೊಡುವ ಕೆಲಸ ಆಗಿದೆ. ಇದು ಖಂಡನೀಯ. ಬೆಳಗಾವಿ ಇರಲಿ, ಬೆಳಗಾವಿಯ ಹಿಡಿ ಮಣ್ಣನ್ನು ಮುಟ್ಟಲೂ ಸಾಧ್ಯವಿಲ್ಲ. ಇಲ್ಲಿ ಕನ್ನಡಿಗರು ಅಷ್ಟೊಂದು ಗಟ್ಟಿಯಾಗಿದ್ದಾರೆ. ಅನೇಕ ಸಂದರ್ಭದಲ್ಲಿ ನಾಡದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಕನ್ನಡದ ವಿಚಾರದಲ್ಲಿ ಚಿತ್ರರಂಗ, ಸಾಹಿತಿಗಳು, ಕನ್ನಡದ ಅಧಿಕಾರಿಗಳು ಗಟ್ಟಿಯಾಗಿ ನಿಂತಿದ್ದಾರೆ ಎಂದು ಮಹಾರಾಷ್ಟ್ರ ಶಿವಸೇನೆ ಸಂಸದನಿಗೆ ಎಚ್ಚರಿಕೆ ನೀಡಿದರು.