ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಏಪ್ರಿಲ್‌ಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದೊಂದಿಗೆ ಕನ್ನಡ ಭವನದ ಉದ್ಘಾಟನೆಯಾಗಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ನಗರದಲ್ಲಿ ಗುರುವಾರ ಜಿಲ್ಲಾ ಕನ್ನಡ ಭವನ ಕಾಮಗಾರಿ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಬಹಳ ಪ್ರತಿಷ್ಟೆಯ ಭವನ. ಇದರ ಚರಿತ್ರೆಯ ಬಗ್ಗೆ ಹೋದಾಗ ವೀರಪ್ಪಮೊಯಿಲಿ ಅವರನ್ನು ನೆನೆಯಲೇಬೇಕು ಎಂದರು.
ಕನ್ನಡ ಭವನದ ಕಾಮಗಾರಿ 2011-12 ರಲ್ಲಿ ಪ್ರಾರಂಭವಾಗಿದ್ದು, ಯಾವೊತ್ತೋ ಮುಕ್ತಾಯ ಆಗಬೇಕಿತ್ತು. ಯಾಕೆ ವಿಳಂಬ ಆಯಿತು ಏನು ಎತ್ತ ಎಂಬ ಬಗ್ಗೆ ಮಾತನಾಡುವುದಿಲ್ಲ. ನಾನು ಸಚಿವನಾದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜತಂಗಡಗಿ ಅವರ ಬಳಿ ಮಾತನಾಡಿ ಭವನ ಪೂರ್ಣಗೊಳ್ಳಲು 6.25 ಕೋಟಿ ಬೇಕಿದೆ ಎಂದು ಮನವಿ ಮಾಡಿದ್ದೆ. ಈ ಸಂಬಂಧ ಈಗಾಗಲೇ 2 ಕೋಟಿ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಜೊತೆಗೆ ಮಾತುಕತೆ ನಡೆಸಿ,6.25 ಕೋಟಿ ಅನುದಾನಕ್ಕೆ ಸಚಿವ ಸಂಪುಟದಲ್ಲಿ ಅನುಮೊದನೆ ಪಡೆದು,ಕಾಮಗಾರಿ ಮುಗಿಸಿ ಅಂತಿಮ ಹಂತಕ್ಕೆ ತರಲಾಗಿದೆ ಎಂದರು.65 ಲಕ್ಷ ರು.ಗಳ ಅನುದಾನದಲ್ಲಿ ಕಲ್ಯಾಣಿ ಅಭಿವೃದ್ದಿ ಮಾಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದು ಅವರು ಕಾರ್ಯಪ್ರವೃತ್ತರಾಗಿದ್ದಾರೆ. ನೂತನ ಕನ್ನಡ ಭವನದಲ್ಲಿ ಸೌಂಡ್ ಸಿಸ್ಟಮ್ ಮತ್ತು ಬೆಳಕಿನ ವ್ಯವಸ್ಥೆಯ ಸಮಸ್ಯೆ ಿರುವುದಾಗಿ ಕಲಾವಿದರು ಹೇಳಿದ್ದಾರೆ. ಎಲ್‌ಇಡಿ ಸ್ಕ್ರೀನ್ ಅಳವಡಿಕೆ ಮಾಡಲು ಅಳವಡಿಕೆ ಮಾಡಲು ನಿರ್ಧರಿಸಿದ್ದೆವು. ಆದರೆ ವೆಚ್ಚ ಹೆಚ್ಚಾಗುವುದಲ್ಲದೇ ಮತ್ತೆ ಮತ್ತೆ ತಂತ್ರಜ್ಞಾನ ಬದಲಾವಣೆಯಾಗುವುದರಿಂದ ಪದೇ ಪದೇ ಬದಲಾವಣೆ ಮಾಡಲಾಗದು ಎಂದು ಪ್ರೊಜೆಕ್ಟರ್ ಮತ್ತು ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ ಎಂದರು.ಕನ್ನಡ ಭವನವೆಂದು ನಾಮಕರಣ ರಂಗಮಂದಿರ ಬದಲಿಗೆ ಕನ್ನಡ ಭವನ ಮರುನಾಮಕರಣ ಮಾಡಿ ಸರಕಾರಿ ಆದೇಶ ಆಗಿದೆ.ಈ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಹೆಸರೋ ಕೃಷ್ಣದೇವರಾಯರ ಹೆಸರನ್ನೋ ಮುನ್ನೆಲೆಗೆ ತರುವುದು ಸೂಕ್ತ ಅಲ್ಲ.ನಾವೆಲ್ಲಾ ಕನ್ನಡಿಗರು ಕರ್ನಾಟಕದಲ್ಲಿದ್ದೇವೆ.ಜಿಲ್ಲೆಗೆ ಒಂದು ಕನ್ನಡಭವನ ಬೇಕಿತ್ತು ಅದು ಆಗಿದೆ ಎನ್ನುವ ಮೂಲಕ ಚರ್ಚೆಗಳಿಗೆ ಪೂರ್ಣವಿರಾಮ ಇಟ್ಟರು.ಈ ವೇಳೆ ಶಾಸಕ ಪ್ರದೀಪ್ ಈಶ್ವರ್,ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ,ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಯಲವಹಳ್ಳಿ ರಮೇಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್.ಜಿ.ಟಿ,ನಿಟ್ಟಾಲಿ, ಎಸಿ ಡಿ.ಎಚ್,ಅಶ್ವಿನ್, ತಹಸೀಲ್ದಾರ್ ಅನಿಲ್, ನಗರಸಭೆ ಸದಸ್ಯ ಅಂಬರೀಶ್, ಕಸಾಪ ಜಿಲ್ಲಾಧ್ಯಕ್ಷ ಪ್ರೊ.ಕೋಡಿರಂಗಪ್ಪ, ತಾಲೂಕು ಅಧ್ಯಕ್ಷ ಯಲುವಹಳ್ಳಿಸೊಣ್ಣೇಗೌಡ, ಕೆ.ಎಂ.ರೆಡ್ಡಪ್ಪ,ಅಡ್ಡಗಲ್ ಶ್ರೀಧರ್,ರಂಗಕರ್ಮಿ,ಜಾನಪದ ಗಾಯಕ ಗ.ನ.ಅಶ್ವತ್ಥ್, ನಟ ದಿಲೀಪ್‌ಕುಮಾರ್ ಮತ್ತಿತರರು ಇದ್ದರು.
ಬಾಕ್ಸ್............................ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ
ಚಿಕ್ಕಬಳ್ಳಾಪುರ:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಯಮತ್ತೂರಿನ ಇಶಾದಲ್ಲಿ ಗೃಹಸಚಿವ ಅಮಿತ್ ಷಾ ಜತೆಗೆ ವೇದಿಕೆ ಹಂಚಿಕೊಂಡ ವಿಚಾರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿಕ್ರಿಯಿಸಿ, ರಾಷ್ಟ್ರೀಯ ಕಾಂಗ್ರೆಸ್ ಹಿಂದೂ ಧರ್ಮದ ವಿರೋಧಿ ಪಕ್ಷವಲ್ಲ. ಸರ್ವಧರ್ಮಗಳನ್ನೂ ಪ್ರೀತಿಸುವ ನಾವು ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ. ಡಿ.ಕೆ.ಶಿವಕುಮಾರ್ ಕುಂಭಮೇಳಕ್ಕೆ ಹೋಗುವುದು, ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಗೃಹಸಚಿವ ಅಮಿತ್ ಷಾ ಜತೆಗೆ ವೇದಿಕೆ ಹಂಚಿಕೊಳ್ಳುವುದು ಅವರ ವೈಯಕ್ತಿಕ ವಿಚಾರ. ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ. ವಿರೋಧ ಪಕ್ಷಗಳು ಬೇಕಾಗಿಯೇ ಇದನ್ನು ಸುದ್ದಿ ಮಾಡುತ್ತಿವೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಜಿಲ್ಲಾ ಕನ್ನಡ ಭವನ ಕಾಮಗಾರಿಯನ್ನು ಸಚಿವರು ವೀಕ್ಷಿಸಿದ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಷ್ಟಕ್ಕೂ ವಿಭಿನ್ನ ಪಕ್ಷಗಳ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲ, ಕುಂಭಮೇಳ ಇಂದು ಮಾತ್ರ ಪ್ರಾರಂಭವಾಗಿದ್ದಲ್ಲ. 150 ವರ್ಷಗಳ ಹಿಂದೆಯೂ ಕುಂಭಮೇಳ ಇತ್ತು. ಆದೇನೂ ಬಿಜೆಪಿ ಬಂದ ಮೇಲೆ ಆರಂಭವಾಗಿದ್ದಲ್ಲ. ಧರ್ಮದ ಬಗ್ಗೆ ಅವರು ನಮಗೆ ಹೇಳಿಕೊಡುವ ಅಗತ್ಯವಿಲ್ಲ ಎಂದು ಚಾಟಿ ಬೀಸಿದರು.