ಅಂಬೇಡ್ಕರ್ ಅವರು ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಓದಿ, ಜ್ಞಾನಿಯಾದರು. ಹೀಗಾಗಿ ಅವರ ಹೆಸರಿನಲ್ಲಿ ಇಡೀ ಪ್ರಪಂಚದಾದ್ಯಂತ ವಿಶ್ವಜ್ಞಾನಿ ದಿನ ಆಚರಿಸಲಾಗುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಜನರಲ್ಲಿ ಸಾಹಿತ್ಯ ಅಭಿರುಚಿ ಬೆಳೆಯಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಶಿಸಿದರು.ವಿಜಯನಗರದ ತಮ್ಮ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಯೋಜನೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯ ಅಭಿರುಚಿಯಿಂದ ಜ್ಞಾನ ಹೆಚ್ಚುತ್ತದೆ. ಇದರಿಂದ ಸಂಘರ್ಷ, ದ್ವೇಷ ಮಾಯವಾಗಿ ಪರಸ್ಪರ ಪ್ರೀತಿ, ಸಾಮರಸ್ಯ, ಸೌಹಾರ್ದತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಹಿತ್ಯ ಕೃತಿಗಳನ್ನು ಓದುತ್ತಿದ್ದೇನೆ. ಯುವರಾಜ ಕಾಲೇಜು, ಎಂಡಿಟಿಬಿಸಿ ಕಾಲೇಜಿನಲ್ಲಿ ಓದುವಾಗ ಪಠ್ಯಕ್ಕಿಂತ ಸಾಹಿತ್ಯ ಕೃತಿಗಳನ್ನು ಓದಿದ್ದೆ ಹೆಚ್ಚು. ನಂತರ ದಾವಣಗೆರೆಯಲ್ಲಿ ಮೆಡಿಕಲ್ ಸೀಟು ಸಿಕ್ಕಿದ್ದರಿಂದ ಮೈಸೂರಿನಲ್ಲಿ ಹೆಚ್ಚು ಓದಲಾಗಲಿಲ್ಲ. ಆದರೆ ಎಲ್ಲೆಡೆ ಹೋದಾಗ ಸಾಕಷ್ಟು ಪುಸ್ತಕಗಳನ್ನು ತರುತ್ತಿದ್ದೆ. ಇದರಿಂದ ಮನೆಯಲ್ಲಿ ಸಾವಿರಾರು ಪುಸ್ತಕಗಳಿವೆ ಎಂದರು.ಅಂಬೇಡ್ಕರ್ ಅವರು ಸುಮಾರು ಐವತ್ತು ಸಾವಿರ ಪುಸ್ತಕಗಳನ್ನು ಓದಿ, ಜ್ಞಾನಿಯಾದರು. ಹೀಗಾಗಿ ಅವರ ಹೆಸರಿನಲ್ಲಿ ಇಡೀ ಪ್ರಪಂಚದಾದ್ಯಂತ ವಿಶ್ವಜ್ಞಾನಿ ದಿನ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಸಂವಿಧಾನ ಗ್ರಂಥವನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ.ಸಿಪಿಕೆ ಮಾತನಾಡಿ, ಗ್ರಂಥಾಲಯ ಸಂಸ್ಕೃತಿ ಉಳಿಯಬೇಕು ಹಾಗೂ ಬೆಳೆಯಬೇಕು ಎಂದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾತನಾಡಿ, ಜನರಲ್ಲಿ ಓದುವ ಅಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದಲೇ ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 25 ಗ್ರಂಥಾಲಯಗಳ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಮನೆಯಿಂದ ಚಾಲನೆ ನೀಡಲಾಗಿದೆ ಎಂದರು.
ಇದಕ್ಕಾಗಿ ವಿಭಾಗವಾರು ನಂಜನಗೂಡು ತಿರುಮಲಾಂಬ, ಡಾ.ಹಾ.ಮಾ. ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥ ಅವರ ಹೆಸರಿನಲ್ಲ ಪ್ರಶಸ್ತಿಗಳನ್ನು ಪ್ರತಿವರ್ಷ ಪ್ರಾಧಿಕಾರದಿಂದ ನೀಡಲಾಗುವುದು. ಮನೆಗೊಂದು ಗ್ರಂಥಾಲಯ ಯೋಜನೆಯಿಂದ ಅಂಗಡಿಯಿಂದ ಹಿಡಿದು ಪುಸ್ತಕಗಳ ಮುದ್ರಣಕಾರರವರೆಗೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಜಾಗೃತ ಸಮಿತಿಯ ಸದಸ್ಯರಾದ ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ದೇವರಾಜ್ ಪಿ. ಚಿಕ್ಕಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸುಗಮ ಸಂಗೀತಗಾರ ಪ್ರೊ.ಎಸ್. ಮಲ್ಲಣ್ಣ, ಪ್ರೊ.ಕೆ.ಆರ್. ಪ್ರೇಮಲೀಲಾ, ಕನ್ನಡ ಹೋರಾಟಗಾರ ಬಿ.ಎ. ಶಿವಶಂಕರ್, ಕೋಟಹುಂಡಿ ಮಹದೇವ್ ಮೊದಲಾದವರು ಇದ್ದರು. ಸುಚಿತ್ರಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.