ಸಾರಾಂಶ
ಮಂಡ್ಯ : ಯಾವುದೇ ಭಾಷೆ ಇನ್ನೊಂದು ಭಾಷೆಯನ್ನು ದ್ವೇಷಿಸಿ ಬೆಳೆಯಲು ಸಾಧ್ಯವಿಲ್ಲ. ಎಲ್ಲ ಭಾಷೆಯನ್ನು ಪ್ರೀತಿಸಿ ನಮ್ಮ ಕನ್ನಡ ಭಾಷೆಯನ್ನು ಅಪ್ಪಿ ಮುನ್ನಡೆಯಬೇಕು. ಆಗ ಮಾತ್ರ ಕನ್ನಡ ನಿತ್ಯ ನೂತನವಾಗಿರಲು ಸಾಧ್ಯ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದ ಅವರು, ಕನ್ನಡ ಕೇವಲ ಭಾಷೆ ಮಾತ್ರವಲ್ಲ ಅದು ನಮ್ಮ ಸಂಸ್ಕೃತಿ. ಊಟ, ಉಪಚಾರ, ಉಡುಪು, ಆಚಾರ, ವಿಚಾರವನ್ನು ಬಿಂಬಿಸುವ ನುಡಿ. ಈ ನಾಡಿನ ಎಲ್ಲಾ ಜಾತಿ, ಧರ್ಮ, ಪಂಗಡದ ಜನರನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುವ ಶಕ್ತಿ ಇದ್ದರೆ ಅದು ಕನ್ನಡಕ್ಕೆ ಮಾತ್ರ ಎಂದರು.
ಇಂಥ ಸಾಹಿತ್ಯ ಸಮ್ಮೇಳನಗಳು ನಮ್ಮ ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿ ಮಾಡುತ್ತವೆ. ವಿಜ್ಞಾನ, ತಂತ್ರಜ್ಞಾನದ ಕಾಲದಲ್ಲಿ ನಾವಿದ್ದರೂ ಕನ್ನಡ ಭಾಷಾ ಸಂಸ್ಕೃತಿ, ಸಾಹಿತ್ಯ ಬೆಳೆಸುವಂತಹ ಕಾರ್ಯದಲ್ಲಿಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡ ಭಾಷೆ, ಸಂಸ್ಕೃತಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಪಸರಿಸಿದೆ. ಅನೇಕ ಕನ್ನಡ ಪರ ಸಂಘಟನೆಗಳು ಕನ್ನಡಕ್ಕಾಗಿ ದುಡಿಯುತ್ತಿವೆ. ಕನ್ನಡವನ್ನು ಹೊರರಾಜ್ಯ, ಹೊರ ದೇಶಗಳಲ್ಲಿ ಕಟ್ಟಿ ಬೆಳೆಸುವಂತಹ ಕೆಲಸದಲ್ಲಿಅವು ತೊಡಗಿದ್ದು, ಅವುಗಳಿಗೆ ಬೇಕಾದ ಸಹಕಾರ ಕೊಡಲು ನಾವು ಸಿದ್ದರಿದ್ದೇವೆ. ಗಡಿನಾಡಿನ ಕನ್ನಡ ಶಾಲೆಗಳಿಗೆ ಕೊಡುತ್ತಿರುವ ಸಹಕಾರವನ್ನು ರಾಜ್ಯ ಸರ್ಕಾರ ಇನ್ನಷ್ಟು ಹೆಚ್ಚಿಸಬೇಕು. ಗಡಿಭಾಗದ ಎಲ್ಲ ಭಾಷೆಗಳನ್ನು ಕಲಿಯಬೇಕು. ಆದರೆ, ಕನ್ನಡವೇ ನಮಗೆ ಪ್ರಧಾನವಾಗಿರಬೇಕು ಎಂದು ಹೇಳಿದರು.