ಸಾರಾಂಶ
ಕನ್ನಡಪ್ರಭ ವಾರ್ತೆ ಸುಳ್ಯ
ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರದ್ದಾಗಿದೆ. ಕರ್ನಾಟಕದ ಎಲ್ಲೇ ಹೋದರೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ಭಾಷಾ ಮಾಧ್ಯಮವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ನಮ್ಮ ಜನರ ಮೇಲಿದೆ ಎಂದು ಹಿರಿಯ ಸಾಹಿತಿ ಲೀಲಾ ದಾಮೋದರ ಹೇಳಿದರು.ಅರಂತೋಡಿನಲ್ಲಿ ನಡೆದ ಸುಳ್ಯ ತಾಲೂಕು ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳಲ್ಲಿ ಓದುವ ಹವ್ಯಾಸ ಬೆಳಸಬೇಕಾದದ್ದು ಪೋಷಕರ ಕರ್ತವ್ಯ. ಪತ್ರಿಕೆಗಳನ್ನು ಓದುವ ಹವ್ಯಾಸ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಸಾಹಿತ್ಯ ಪುಟಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಕನ್ನಡ ಸಾಹಿತ್ಯ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು.ಲೇಖಕ ಡಾ.ನರೇಂದ್ರ ರೈ ದೇರ್ಲ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಪ್ರಸ್ತಾವನೆಗೈದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಆಶಯ ನುಡಿಗಳನ್ನಾಡಿದರು.ಸಾಹಿತಿ ಡಾ. ಪ್ರಭಾಕರ ಶಿಶಿಲರ ಕಾದಂಬರಿ ‘ಕುಂತಿ’, ಕಥಾಸಂಕಲನ ‘ಕಲ್ಲುರ್ಟಿಯ ಕುಕ್ಕುಟ ಕಥನಗಳು’, ಸಮ್ಮೇಳನಾಧ್ಯಕ್ಷೆ ಲೀಲಾ ದಾಮೋದರ ಅವರ ಕವನಸಂಕಲನ ‘ನದಿಯ ನಾದ’ ಸಂಗೀತ ರವಿರಾಜ್ ಅವರ ಲಲಿತಪ್ರಬಂಧ ‘ಪಯಸ್ವಿನಿಯ ತೀರದಲ್ಲಿ’ ಹಾಗೂ ವಿಮರ್ಶಾ ಬರಹ ‘ಅಕ್ಕರೆಯ ಕಡೆಗೋಲು’, ಪ್ರಕಾಶ್ ಮೂಡಿತ್ತಾಯ ಅವರ ವಿಜ್ಞಾನ ನಾಟಕಗಳಾದ ‘ಲಸಿಕೆಯ ಕಥೆ’ ಹಾಗೂ ‘ಮೌಢ್ಯವೇಕೆ ಇನ್ನೂ’ ಮತ್ತು ನಿರೀಕ್ಷಾ ಸುಲಾಯ ಅವರ ಕವನ ಸಂಕಲನ ‘ನನ್ನ ಮನಸು ನನ್ನ ಕನಸು’ ಕೃತಿಗಳನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಬಿಡುಗಡೆಗೊಳಿಸಿದರು.ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಶುಭಹಾರೈಸಿದರು. ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಕೆ.ಆರ್. ಗಂಗಾಧರ, ತಹಸೀಲ್ದಾರ್ ಮಂಜುಳಾ, ಅರಂತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ, ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸಾಹಿತ್ಯ ಸಮ್ಮೇಳನದ ಸಂಘಟಕ ಕಿಶೋರ್ ಕುಮಾರ್ ಕಿರ್ಲಾಯ, ಅಬ್ದುಲ್ಲ ಅರಂತೋಡು, ಚಂದ್ರಾವತಿ ಬಡ್ಡಡ್ಕ, ರಾಮಚಂದ್ರ ಪಲ್ಲತ್ತಡ್ಕ, ಪಂಜ ಹೋಬಳಿ ಘಟಕ ಅಧ್ಯಕ್ಷ ಬಾಬು ಗೌಡ, ಚಂದ್ರಾವತಿ ಕೆ., ದಯಾನಂದ ಆಳ್ವ, ತೇಜಸ್ವಿ ಕಡಪಳ ಇದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿದರು. ಉಪನ್ಯಾಸಕ ಪದ್ಮಕುಮಾರ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಕಾರ್ಯಕ್ರಮದ ಮೊದಲಾಗಿ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ರೈತಗೀತೆ ನಡೆಯಿತು. ಉಪನ್ಯಾಸಕ ಮೋಹನಚಂದ್ರ ನಿರೂಪಿಸಿದರು.