ಕನ್ನಡ ನಾಡಿನ ಸಂಸ್ಕೃತಿ ವಿಶ್ವವ್ಯಾಪಿ ಬೆಳವಣಿಗೆ

| Published : Jun 25 2024, 12:35 AM IST

ಸಾರಾಂಶ

ಕರ್ನಾಟಕಕ್ಕೂ ಮತ್ತು ಅಂಡಮಾನಿಗೂ ಭಾವನಾತ್ಮಕ ಸಂಬಂಧವಿದೆ. ಕನ್ನಡ ನಾಡಿನ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ವಿಶ್ವವ್ಯಾಪಿ ಬೆಳವಣಿಗೆ ಹೊಂದಿರುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕರ್ನಾಟಕಕ್ಕೂ ಮತ್ತು ಅಂಡಮಾನಿಗೂ ಭಾವನಾತ್ಮಕ ಸಂಬಂಧವಿದೆ. ಕನ್ನಡ ನಾಡಿನ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ವಿಶ್ವವ್ಯಾಪಿ ಬೆಳವಣಿಗೆ ಹೊಂದಿರುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷತೆ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.ಅಂಡಮಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಅಂಡಮಾನ ಕನ್ನಡಿಗರ ಸಂಘ ಹಾಗೂ ವಿಷ್ಣು ನಾಯಕ ಸಂಸ್ಮರಣಾ ವೇದಿಕೆ, ಹೃದಯ ವಾಹಿನಿ, ಮಂಜುನಾಥ್ ಎಜುಕೇಶನ್‌ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 19ನೇ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿ ವಿಶ್ವ ವ್ಯಾಪಿಯಾಗಿ ಬೆಳೆಯುತ್ತಿದೆ. ಇದಕ್ಕೆ ಕನ್ನಡಿಗರ ಸಹೃದಯವೇ ಕಾರಣ. ಅಂಡಮಾನಿನ ಮಣ್ಣಿನ ಪ್ರತಿ ಕಣದಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಿಚ್ಚಿದೆ. ಇಲ್ಲಿ ಬರುವ ಪ್ರತಿಯೊಬ್ಬ ಭಾರತೀಯರಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತದೆ. ಸ್ವಾತಂತ್ರ್ಯದ ಕಿಡಿ ಹಚ್ಚಿದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಉಳ್ಳಾಲದ ರಾಣಿ ಅಬ್ಬಕ್ಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಸಾವರ್ಕರ್ ಅವರಂತಹ ಸ್ವಾತಂತ್ರ್ಯಸೇನಾಧಿಗಳನ್ನು ಇಲ್ಲಿ ನೆನೆಸುವುದು ನಮ್ಮ ದೇಶಪ್ರೇಮದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸುವುದು ಎಂದರು.ಕನ್ನಡ ಸಮ್ಮೇಳನವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ದನಂಜಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಮತ್ತು ಭಾಷೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಲಿ ವಿಶ್ವ ವ್ಯಾಪಿಯಾಗಿ ಬೆಳವಣಿಗೆ ಹೊಂದಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಅಂಡಮಾನ್ ನೆಲದಲ್ಲಿ ಕನ್ನಡಿಗರು ಇಲ್ಲಿ ಸಮ್ಮೇಳವನ್ನು ಆಯೋಜಿಸುವ ಮೂಲಕ ಕನ್ನಡದ ಕಂಪು ಹೊರಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.ಗವಿಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರತಿಯೊಬ್ಬ ಭಾರತೀಯನು ಅಂಡಮಾನ್ ಜೈಲಿಗೆ ಭೇಟಿ ಕೊಡಬೇಕು, ಆಗ ವೀರ ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಸೇನಾನಿಗಳು ಅನುಭವಿಸಿದ ಯಾತನೆ ಎಂತಹದ್ದೆಂದು ತಿಳಿದುಕೊಳ್ಳಬಹುದು. ಬ್ರಿಟಿಷರ ದೌರ್ಜನ್ಯದಿಂದ ಎಷ್ಟೋ ಭಾರತೀಯ ಸ್ವಾತಂತ್ರ್ಯ ಸೇನಾನಿಗಳು ಈ ನೆಲದಲ್ಲಿ ನರಕ ಅನುಭವಿಸಿ ಜೀವ ಕಳೆದುಕೊಂಡಿದ್ದಾರೆ. ಅವರನ್ನು ಈ ಸ್ಪಂದರ್ಭದಲ್ಲಿ ಸ್ಮರಿಸುವುದರಿಂದ ನಮ್ಮಲ್ಲಿ ದೇಶಾಭಿಮಾನ ಉಕ್ಕುತ್ತದೆ ಎಂದರು. ಗೌರವ ಅತಿಥಿಗಳಾದ ಅಂಡಮಾನ್ ನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕನ್ನಡಿಗ ಡಾ.ಟಿ.ಎಸ್.ಅಶೋಕ್ ಕುಮಾರ ಮಾತನಾಡಿದರು.ಸಮ್ಮೇಳನದ ಚಿಂತನಾಗೋಷ್ಠಿಯಲ್ಲಿ ಖ್ಯಾತ ಚಿಂತಕರು ಮತ್ತು ವಾಗ್ಮಿ ಹಾಗೂ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮೊಹಮ್ಮದ್ ರಫಿ ಪಾಷ ಅವರು ತಮ್ಮ ಚಿಂತನೆ ಮಂಡಿಸಿದರು. ಕವಿಗೋಷ್ಠಿ ಕಾರ್ಯಕ್ರಮ ಜರುಗಿತು. ಸಮ್ಮೇಳನದಲ್ಲಿ ಖ್ಯಾತ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮ ಮುತ್ತು ಹಾಸ್ಯ ಕಲಾವಿದರಿಂದ ನಗೆ ಹಬ್ಬ ಕಾರ್ಯಕ್ರಮಗಳು ಜರುಗಿದವು. ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಗೋನಾ ಸ್ವಾಮಿ ಮತ್ತು ಶಿವರಾಜ್ ಪಾಂಡೇಶ್ವರ ರಸಮಂಜರಿ ಪ್ರೇಕ್ಷಕರನ್ನು ರಂಜಿಸಿದರು.

ಈ ಸಮಾರಂಭದಲ್ಲಿ ಅತಿಥಿಗಳಾಗಿ ಬೆಂಗಳೂರಿನ ಗೊ.ನಾ.ಸ್ವಾಮಿ, ರಾಯಚೂರಿನ ಡಾ.ಇ.ಆಂಜನೇಯ, ಕನ್ನಡ ಸಂಘ ಅಂಡಮಾನ್ ಕಾರ್ಯಕಾರಿ ಸಮಿತಿಯ ಡಾ.ಶಿವಕುಮಾರ್, ನಿವೃತ್ತ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ‌.ಮಂಜುನಾಥ್ ಸಾಗರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ರೋನಿಕಾ ವಂದಿಸಿದರು.