ಶಿಕ್ಷಕರು ಕಟ್ಟಿದ ಭಾಷಾ ವಲಯವನ್ನು ಕೆಲವು ರಾಜಕಾರಣಿಗಳು ಹೊಡೆದು ಹಾಕಿದ್ದಾರೆ.

ಹೊಸಪೇಟೆ: ಕನ್ನಡ ಒಂದು ಸ್ವತಂತ್ರ ದ್ರಾವಿಡ ಭಾಷೆ. ಅದು ಯಾವ ಭಾಷೆಯ ಅಡಿಯಾಳಲ್ಲ. ಆದರೆ ಇಂದು ಕನ್ನಡ ಭಾಷೆಯ ಬಗೆಗಿನ ಗೌರವ, ಅಭಿಮಾನಗಳು ಕಡಿಮೆಯಾಗುತ್ತಿವೆ. ಸಂಸ್ಕೃತ, ಇಂಗ್ಲೀಷ್, ಹಿಂದಿ ಭಾಷೆಗಳು ಕನ್ನಡ ಭಾಷೆಗೆ ಕಂಟಕಪ್ರಾಯವಾಗಿವೆ. ಮತ್ತೊಂದು ಕಡೆ ಕನ್ನಡಿಗರೇ ಕನ್ನಡ ಮಾತನಾಡದೇ ಅದರ ಶತ್ರುಗಳಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಲೇಖಕ ಮತ್ತು ವಿಶ್ರಾಂತ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿವಿಯ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಲೋಕ ತಾಯ್ನುಡಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ನುಡಿಯ ಮುಂದಿರುವ ಪ್ರಸ್ತುತ ಬಿಕ್ಕಟ್ಟುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಶಿಕ್ಷಕರು ಕಟ್ಟಿದ ಭಾಷಾ ವಲಯವನ್ನು ಕೆಲವು ರಾಜಕಾರಣಿಗಳು ಹೊಡೆದು ಹಾಕಿದ್ದಾರೆ. ಕನ್ನಡ ಭಾಷೆ ಎಐ ಕಾಲದಲ್ಲಿ ಹೊಸ ಸವಾಲುಗಳಿಗೆ ಮುಖಾಮುಖಿಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಶೈಕ್ಷಣಿಕವಾಗಿ ಕನ್ನಡ ಮುಳುಗಡೆಯಾಗುತ್ತಿದೆ. ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಕನ್ನಡದ ಅಸ್ಮಿತೆಯ ಕಾರಣಕ್ಕಾಗಿ ರೂಪುಗೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚು ಅನುದಾನ ಮತ್ತು ಬೆಂಬಲ ಸಿಗಬೇಕು. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಶೆಟ್ಟರ್ ಅವರ ಸಂಶೋಧನೆ ಪ್ರಮುಖ ಪಾತ್ರವಹಿಸಿದೆ. ಕರ್ನಾಟಕದಲ್ಲಿ 19 ಮಾತೃಭಾಷೆಗಳಿವೆ. ಕರ್ನಾಟಕ ಸರ್ಕಾರ ಕನ್ನಡದ ಜೊತೆಗೆ ಇಲ್ಲಿರುವ ಕೊರಚ, ಲಂಬಾಣಿ, ಹಕ್ಕಿ-ಪಿಕ್ಕಿಗಳ ಭಾಷೆಯ ಪುಸ್ತಕಗಳನ್ನು ಪ್ರಕಟಿಸಬೇಕು. ಸರ್ಕಾರಗಳು ಸದಾ ಮಾತೃಭಾಷೆಗಳ ಪರವಾಗಿ ಕೆಲಸ ಮಾಡಿದಾಗ ಮಾತ್ರ ತಾಯ್ನುಡಿಗಳು ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸಮಾರಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಕನ್ನಡ ಭಾಷೆ ಯಾವಾಗ, ಎಲ್ಲಿ, ಹೇಗೆ ಹುಟ್ಟಿತು ಎಂಬುದರ ಬಗ್ಗೆ ಸಂಶೋಧನಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನಗಳನ್ನು ಕೈಗೊಳ್ಳಬೇಕು. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ತಮಿಳಿನ ಹಳೆಯ ಕಾವ್ಯಗಳಲ್ಲೂ ಕನ್ನಡ ಪದ ಬಳಕೆ ಕಂಡು ಬರುತ್ತದೆ ಎಂದರು. ಕರ್ನಾಟಕದಲ್ಲಿ ವಿಜಯನಗರದ ಅರಸರು ಕನ್ನಡದ ಜೊತೆಗೆ ತೆಲುಗು ಭಾಷೆಗೂ ಆದ್ಯತೆ ನೀಡಿದ್ದರು. ಆದ್ದರಿಂದ ಈ ಭಾಗದಲ್ಲಿ ಇಂದಿಗೂ ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ ಉತ್ತಮ ಸಾಮರಸ್ಯವಿದೆ. ಯಾವ ಭಾಷೆಗೆ ಪ್ರಭುತ್ವದಲ್ಲಿ ಪೋಷಣೆ ಸಿಗುತ್ತದೆಯೋ ಅದು ಚೆನ್ನಾಗಿ ಸಮೃದ್ಧವಾಗುತ್ತದೆ ಎಂದು ಅವರು ತಿಳಿಸಿದರು.ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಅಶೋಕಕುಮಾರ ರಂಜೇರೆ ಮಾತನಾಡಿ, ಜಗತ್ತಿನಲ್ಲಿ ಧರ್ಮ ಮತ್ತು ಭಾಷೆಗೆ ಸಂಬಂಧಪಟ್ಟ ಹೋರಾಟಗಳು ಚಾರಿತ್ರಿಕವಾಗಿವೆ. ಬಾಂಗ್ಲಾದೇಶದ ಉಗಮಕ್ಕೆ ಭಾಷಾ ಚಳವಳಿಯೇ ಕಾರಣವಾಯಿತು. ಈ ಭಾಷಿಕ ಚಳವಳಿಯಲ್ಲಿ ಮಡಿದ ಹುತಾತ್ಮರ ನೆನಪಿಗಾಗಿ ಲೋಕ ತಾಯ್ನುಡಿ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

ಯುನೆಸ್ಕೋ 2000 ಇಸವಿಯಿಂದ ಲೋಕ ತಾಯ್ನುಡಿ ದಿನ ಆಚರಣೆಯನ್ನು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷೆ ಆಡಳಿತಾತ್ಮಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುನ್ನೆಲೆಗೆ ತರಬೇಕು ಎಂಬ ಉದ್ದೇಶದಿಂದ ಆಚರಿಸಿಕೊಂಡು ಬರುತ್ತಿದೆ ಎಂದರು.

ಕನ್ನಡ ಭಾಷಾಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಪಿ. ಮಹಾದೇವಯ್ಯ, ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಡಾ. ಶೈಲಜ ಇಂ. ಹಿರೇಮಠ, ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಶಿವಾನಂದ ವಿರಕ್ತಮಠ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಗೋವಿಂದ, ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಟಿ. ಗುರುಪ್ರಸಾದ ಮತ್ತು ಇತರೆ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

ಸಂಶೋಧನಾರ್ಥಿ ವಿಶ್ವನಾಥ ಟಿ. ನಿರೂಪಿಸಿದರು.