ಕೇರಳ ರೀತಿ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರಿಂದಲೇ ಅಪಸ್ವರ?

| Published : Sep 17 2024, 12:54 AM IST / Updated: Sep 17 2024, 05:10 AM IST

ಕೇರಳ ರೀತಿ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರಿಂದಲೇ ಅಪಸ್ವರ?
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ   ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪ್ರಿವೆನ್ಷನ್‌ ಆಫ್‌ ಸೆಕ್ಸುವಲ್‌ ಹರಾಸ್‌ಮೆಂಟ್‌- ಪಾಶ್)  ರಚನೆಗೆ ಕೆಲ ನಿರ್ಮಾಪಕರೇ  ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ

 ಬೆಂಗಳೂರು :  ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಹಿತರಕ್ಷಣೆಗಾಗಿ ಕೂಡಲೇ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪ್ರಿವೆನ್ಷನ್‌ ಆಫ್‌ ಸೆಕ್ಸುವಲ್‌ ಹರಾಸ್‌ಮೆಂಟ್‌- ಪಾಶ್)ಯನ್ನು ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿದೆ. ಈ ಕುರಿತು ಚಿತ್ರರಂಗದ ವಿವಿಧ ವಿಭಾಗಗಳ ಜೊತೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲು ವಾಣಿಜ್ಯ ಮಂಡಳಿ 15 ದಿನಗಳ ಕಾಲಾವಕಾಶ ಕೋರಿದೆ.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಕೆಲ ನಿರ್ಮಾಪಕರೇ ಇಂತಹ ಸಮಿತಿ ರಚಿಸುವುದಕ್ಕೆ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಪ್ರಕರಣಗಳು ಹೊರಬಂದ ನಂತರ ಅಲ್ಲಿ ಚಿತ್ರನಟಿಯರ ದೂರು ಆಲಿಸಲು ಸಮಿತಿ ರಚನೆ ಮಾಡಿರುವಂತೆ ಕರ್ನಾಟಕದಲ್ಲೂ ಸಮಿತಿ ರಚನೆ ಮಾಡಬೇಕು ಎಂಬ ಕೆಲ ಕನ್ನಡದ ನಟಿಯರ ಬೇಡಿಕೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಆಂತರಿಕ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ‘ಚಿತ್ರರಂಗ ಮಾತ್ರವಲ್ಲ, ಮಹಿಳೆಯರು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ರಕ್ಷಣೆಗಾಗಿ ಒಂದು ಆಂತರಿಕ ಸಮಿತಿ ರಚಿಸಬೇಕು ಎಂದು ಸರ್ಕಾರವೇ ಅಧಿಸೂಚನೆ ಹೊಡೆಸಿದೆ. ಹೀಗಾಗಿ ಕಡ್ಡಾಯವಾಗಿ ‘ಪಾಶ್‌’ ಕಮಿಟಿ ರಚನೆ ಮಾಡಬೇಕು. ಇದುವರೆಗೂ ಯಾಕೆ ಸಮಿತಿ ಮಾಡಿಲ್ಲ ಎಂಬುದು ಗೊತ್ತಿಲ್ಲ. ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಹೋಗುತ್ತೇವೆ ಎಂದಾಗ ಪೋಷಕರೇ ಧೈರ್ಯವಾಗಿ ಕಳುಹಿಸಿ ಕೊಡಬೇಕು. ಅಂಥ ವಾತಾವರಣ ನಿರ್ಮಾಣಕ್ಕೆ ಆಂತರಿಕ ಸಮಿತಿ ರಚನೆ ಆಗಬೇಕು’ ಎಂದು ಅಭಿಪ್ರಾಯಪಟ್ಟರು.‘ಆಯೋಗಕ್ಕೆ ಇದುವರೆಗೂ ಯಾವೊಬ್ಬ ನಟಿಯರೂ ದೂರು ನೀಡಿಲ್ಲ. ಜನಪ್ರಿಯತೆ ಕಾರಣಕ್ಕೆ ನಟಿಯರು ತಮ್ಮ ಮೇಲಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಆಗದೆ ಇರಬಹುದು. ಹೀಗಾಗಿ ಇಂಥ ಆಂತರಿಕ ಸಮಿತಿಗಳನ್ನು ಮಾಡುವುದು ಅಗತ್ಯವಾಗಿದೆ’ ಎಂದು ಅವರು ತಿಳಿಸಿದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌, ‘ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ರಕ್ಷಣೆಗೆ ನಾವು ಯಾವಾಗಲೂ ಬದ್ಧವಾಗಿರುತ್ತೇವೆ. ಆಯೋಗದ ಅಧ್ಯಕ್ಷರು ಸೂಚಿಸಿರುವಂತೆ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಮಾಡಲು ಉದ್ಯಮದ ಎಲ್ಲಾ ಅಂಗ ಸಂಸ್ಥೆಗಳ ಜತೆಗೆ ಮಾತನಾಡುತ್ತೇವೆ. ಇದಕ್ಕೆ 15 ದಿನಗಳ ಕಾಲಾವಕಾಶ ಕೇಳಿದ್ದೇವೆ. ಚಿತ್ರರಂಗದಲ್ಲಿ 24 ವಿಭಾಗಗಳಿವೆ. ಎಲ್ಲಾ ವಿಭಾಗಗಳ ಜತೆಗೆ ಚರ್ಚಿಸಬೇಕಿದೆ’ ಎಂದು ಹೇಳಿದರು.

ಸಭೆಯಲ್ಲಿ ನಟಿಯರಾದ ತಾರಾ ಅನುರಾಧ, ಭಾವನಾ ರಾಮಣ್ಣ, ಸಿಂಧು ಲೋಕನಾಥ್‌, ನೀತು ಶೆಟ್ಟಿ, ಸಂಜನಾ ಗರ್ಲಾನಿ, ಅನಿತಾ ಭಟ್‌, ಕವಿತಾ ಲಂಕೇಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಕೆಎಫ್‌ಸಿಸಿ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿ ಅಗತ್ಯ ಇಲ್ಲ

ಕೇರಳ ರೀತಿ ಕನ್ನಡ ಚಿತ್ರರಂಗದಲ್ಲಿ ಸಮಿತಿ ಅಗತ್ಯ ಇಲ್ಲ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇದೆ. ಯಾವುದೇ ರೀತಿಯ ಸಮಸ್ಯೆಗಳಾದರೆ ಕೂಡಲೇ ನಟಿಯರು ದೂರು ನೀಡಬಹುದು. ವಾಣಿಜ್ಯ ಮಂಡಳಿಗೂ ದೂರು ನೀಡಬಹುದು. ಕೇರಳದಂತೆ ಇಲ್ಲೂ ಸಮಿತಿ ಮಾಡಿದರೆ ಚಿತ್ರರಂಗ ತೊಂದರೆಗೆ ತುತ್ತಾಗಲಿದೆ.

– ಸಾ.ರಾ.ಗೋವಿಂದು, ನಿರ್ಮಾಪಕ

ವ್ಯವಹಾರಕ್ಕೆ ತೊಂದರೆ

ಈ ರೀತಿಯ ಸಮಿತಿಗಳಿಂದ ಚಿತ್ರರಂಗದಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕೆ ತೊಂದರೆ ಆಗಲಿದೆ. ವ್ಯಾವಹಾರಿಕ ಸಮಸ್ಯೆಗಳ ಕಾರಣಕ್ಕೆ ನಾವು ಸಮಿತಿ ಬೇಡ ಎನ್ನುತ್ತಿದ್ದೇವೆಯೇ ಹೊರತು, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದ್ದರೆ ಅವು ಆಚೆ ಬರುತ್ತವೆ ಎನ್ನುವ ಉದ್ದೇಶದಿಂದಲ್ಲ.

ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕ

ನಮಗೆ ದೂರು ಬಂದಿದೆ

ರಾಜ್ಯ ಮಹಿಳಾ ಆಯೋಗ ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ದೂರುಗಳು ಬಂದಿವೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಫೈರ್ ಸಂಸ್ಥೆಗೆ ದೂರುಗಳು ಬಂದಿವೆ. 90 ವರ್ಷಗಳ ಚಿತ್ರರಂಗದಲ್ಲಿ ಅಂಥ ಯಾವ ಬೆಳವಣಿಗೆಯೂ ನಡೆದಿಲ್ಲ ಎನ್ನುತ್ತಿದ್ದಾರೆ. ನಡೆದಿದೆ ಎನ್ನುವುದಕ್ಕೆ ನಮ್ಮಲ್ಲಿ ದೂರುಗಳಿವೆ.

- ಕವಿತಾ ಲಂಕೇಶ್, ನಿರ್ದೇಶಕಿ

ನನಗೆ ಶೋಷಣೆ ಆಗಿದೆ

ಚಿತ್ರರಂಗದಲ್ಲಿ ಮಹಿಳೆಯರ ಶೋಷಣೆ ಇಲ್ಲ ಎನ್ನುತ್ತಿದ್ದಾರೆ. ಆದರೆ ನನಗೆ ಆಗಿದೆ. ಈ ಬಗ್ಗೆ ನಾನು ಮಾತನಾಡುತ್ತಿರಬೇಕಾದರೆ, ‘ನೀನು ಕೂತ್ಕೊಮ್ಮ. ನೀನು ಫೈರ್‌ ಸಂಸ್ಥೆಯಿಂದ ಬಂದಿದ್ಯಾ’ ಎಂದು ಸಾ.ರಾ. ಗೋವಿಂದು ಹೇಳಿದರು. ನಾನು ಎಲ್ಲಿಂದಾದರೂ ಬಂದಿರಲಿ. ನಾನು ನಿಜವನ್ನೇ ಹೇಳುತ್ತಿದ್ದೇನಲ್ಲ. ನನ್ನ ಧ್ವನಿಯನ್ನೇ ಅಡಗಿಸಲು ಯತ್ನಿಸಿದರು. ಎಲ್ಲಾ ಇಂಡಸ್ಟ್ರಿಯಲ್ಲೂ ಒಂದು ಸಂಸ್ಥೆಯಿದೆ. ಆದರೆ ನಮ್ಮಲ್ಲಿ ಇರಲಿಲ್ಲ. ಹೀಗಾಗಿ ನಾವು ‘ಫೈರ್‌’ ಸಂಸ್ಥೆಯ ಮೂಲಕ ಧ್ವನಿ ಎತ್ತಿದ್ದೇವೆ. ಇದರಲ್ಲಿ ತಪ್ಪೇನು? ಈ ಹಿಂದೆ ನಾನೊಂದು ಚೆಕ್‌ಬೌನ್ಸ್‌ ಪ್ರಕರಣದ ವಿಚಾರವಾಗಿ ವಾಣಿಜ್ಯ ಮಂಡಳಿಗೆ ಬಂದಾಗ ನನಗೆ ಸಹಾಯ ಸಿಗಲಿಲ್ಲ. ಇಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇವೆ.

- ನೀತೂ, ನಟಿ

ಮಹಿಳಾ ಆಯೋಗದಿಂದ ಸಮೀಕ್ಷೆ

ಮಹಿಳಾ ಆಯೋಗದಿಂದ ಒಂದು ಸಮೀಕ್ಷೆಯನ್ನೂ ಮಾಡುತ್ತೇವೆ. ಚಿತ್ರರಂಗದಲ್ಲಿರುವ 24 ವಿಭಾಗಗಳ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮೀಕ್ಷೆಯು ಗೌಪ್ಯವಾಗಿ ಇರಲಿದೆ. ಇಲ್ಲಿ ಬಂದಂತಹ ಸಮಸ್ಯೆಗಳನ್ನು ಗೌಪ್ಯವಾಗಿ ಚರ್ಚೆ ಮಾಡಿ, ಒಂದು ನೀತಿಯನ್ನು ಮಾಡಲಿದ್ದೇವೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಕನಿಷ್ಠ ಸೌಲಭ್ಯಗಳನ್ನು ಚಿತ್ರರಂಗ ಕಲ್ಪಿಸಿಕೊಡಬೇಕು. ಚಿತ್ರರಂಗ ಒಂದು ಉದ್ಯಮವಾಗಬೇಕು. ನಾನು ಇದರ ಪರ ಇದ್ದೇನೆ.

- ನಾಗಲಕ್ಷ್ಮಿ ಚೌಧರಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ಚಿತ್ರರಂಗವನ್ನು ಉದ್ಯಮವಾಗಿ ರೂಪಿಸಬೇಕು

ನಮ್ಮ ಗುರಿ ಚಿತ್ರರಂಗವನ್ನು ಒಂದು ಉದ್ಯಮವಾಗಿ ರೂಪಿಸುವ ನಿಟ್ಟಿನಲ್ಲಿ ಇರಬೇಕು. ಉದ್ಯಮ ಎನಿಸಿಕೊಂಡರೆ ಎಲ್ಲಾ ಸೌಲಭ್ಯಗಳು ದೊರಕುತ್ತವೆ. ನಮ್ಮೆಲ್ಲರ ಮೊದಲ ಧ್ಯೇಯ ‘ಉದ್ಯಮ’ ಎನ್ನುವ ಘೋಷಣೆಯನ್ನು ಕಾರ್ಯರೂಪಕ್ಕೆ ತರುವುದು. 

–ತಾರಾ, ನಟಿ

ಚಿತ್ರರಂಗದ ಗೌರವ ಬೀದಿಗೆ ಬರಲಿದೆ

ಲೈಂಗಿಕ ದೌರ್ಜನ್ಯ ಆರೋಪಗಳ ಕಾರಣಕ್ಕೆ ಚಿತ್ರರಂಗದಲ್ಲಿ ಈ ರೀತಿಯ ಸಮಿತಿ ರಚನೆಯಾದರೆ ಮಹಿಳೆಯರೇ ಇಲ್ಲದ ಚಿತ್ರ ನಿರ್ಮಾಣವಾಗಲಿವೆ. ಈಗ ಚಿತ್ರರಂಗವನ್ನು ಬಂದ್‌ ಮಾಡಿ. ನಂತರ ಸಮಿತಿಗಳನ್ನು ಮಾಡಿಕೊಂಡು ಹೋಗಿ. ಇದರಿಂದ ಚಿತ್ರರಂಗದ ಗೌರವ ಬೀದಿಗೆ ಬರುತ್ತದೆಯೇ ಹೊರತು ಬೇರೆ ಏನೂ ಆಗಲ್ಲ. ಇದಕ್ಕೆ ನನ್ನ ವಿರೋಧ ಇದೆ. ಈ ಬಗ್ಗೆ ವಾಣಿಜ್ಯ ಮಂಡಳಿ ಮತ್ತೊಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿ.

ಟೇಸಿ ವೆಂಕಟೇಶ್‌, ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ

ಕನ್ನಡ ಚಿತ್ರರಂಗಕ್ಕೆ ಹೇಮಾ ಸಮಿತಿ ಮಾದರಿ ಬೇಕಿಲ್ಲಚಿತ್ರರಂಗ, ಸಿನಿಮಾ ನಟಿಯರು ಎಂದ ಮೇಲೆ ಸಮಸ್ಯೆಗಳು ಇದ್ದಿದ್ದೇ. ಒಂದು ವೇಳೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಆ ರೀತಿ ಕೆಟ್ಟದ್ದು ಇದ್ದರೆ, ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಕಾಸ್ಟಿಂಗ್ ಕೌಚ್‌ನ ಕೂಗು ನಮ್ಮ ಚಿತ್ರರಂಗದಲ್ಲಿ ಕೇಳಿ ಬಂದಿಲ್ಲ. ಕೆಲವರು ಸಮಾನ ಮನಸ್ಕರು ಗುಂಪು ಕಟ್ಟಿಕೊಂಡು, ಅದಕ್ಕೆ ಫೈರ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಏನಾದರೂ ಸಮಸ್ಯೆಗಳಾದರೆ ಅದಕ್ಕೆಂದೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಲಾವಿದರ ಸಂಘಗಳೂ ಇವೆ. ಅಲ್ಲಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಅದಕ್ಕಾಗಿ ಹೊಸ ಸಂಘ ಮಾಡಬೇಕಾದ ಅಗತ್ಯವಿಲ್ಲ. ಆ ಫೈರ್ ಸಂಸ್ಥೆಯವರ ಮಾತನ್ನು ಕೇಳಬೇಡಿ. ಹೇಮಾ ಸಮಿತಿ ಮಾದರಿ ನಮ್ಮ ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಕಾಗಿಲ್ಲ.

- ಭಾವನಾ ರಾಮಣ್ಣ, ನಟಿ